ಜಗತ್ತಿನ ಏಕಮಾತ್ರ ಸಂಸ್ಕೃತ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಸುಧರ್ಮಾ’ ಈಗ ಅಳಿವಿನ ಭೀತಿ ಎದುರಿಸುತ್ತಿದೆ.
ಸುಧರ್ಮಾ 1970 ರಲ್ಲೇ ಆರಂಭಗೊಂಡಿದೆ. ಮೈಸೂರಿನಿಂದ ಪ್ರಕಟವಾಗುತ್ತಿದ್ದ ಈ ಪತ್ರಿಕೆಯನ್ನು ಸಂಸ್ಕೃತದ ವಿದ್ವಾಂಸರಾದ ಕಲಾಲೆ ನಾಂದುರ ವರದರಾಜ್ ಅಯ್ಯಂಗಾರ್ ಅವರು ಆರಂಭಿಸಿದ್ದರು. ಐತಿಹಾಸಿಕ ಹಿನ್ನಲೆ ಹೊಂದಿರುವ ಸಂಸ್ಕೃತ ಭಾಷೆಯನ್ನು ಉಳಿಸಿ, ಬೆಳೆಸುವುದು ಅವರ ಕನಸಾಗಿತ್ತು. ಆದರೆ ಈಗ ಅದೇ ಪತ್ರಿಕೆ ಸರ್ಕ್ಯುಲೇಷನ್ ಇಲ್ಲದೇ ಪರದಾಡುವ ಸ್ಥಿತಿ ಬಂದಿದೆ.
ಒಂದು ಪುಟದ ಈ ಪತ್ರಿಕೆ ಯೋಗ, ವೇದ, ಸಂಸ್ಕೃತಿ ಮತ್ತು ರಾಜಕೀಯ ವಿಷಯಗಳ ಕುರಿತಾದ ಸುದ್ದಿಯನ್ನು ಹೊಂದಿರುತ್ತದೆ. ಇದು ಕೇರಳ, ಆಸ್ಸಾಂ, ಕರ್ನಾಟಕ, ಜಮ್ಮು-ಕಾಶ್ಮೀರ, ತಮಿಳ್ನಾಡು ಮುಂತಾದ ಕಡೆಗಳ ಪುಸ್ತಕ ಸಂಗ್ರಹಾಲಯದಲ್ಲಿ ಸಿಗುತ್ತದೆ.
ಪತ್ರಿಕೆಯ ಸರ್ಕ್ಯುಲೇಶನ್ ಈಗ ಕೇವಲ 3000 ಪ್ರತಿಗಳಷ್ಟು ಕಡಿಮೆ ಇರುವ ಕಾರಣ ಅಯ್ಯಂಗಾರ್ ಅವರ ಪುತ್ರ ವಿ. ಸಂಪತ್ ಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ. ಹಾಗಾಗಿ ಅವರು ಪತ್ರಿಕೆಯನ್ನು ಮುಂದುವರೆಸಲು ಸರಕಾರದ ಸಹಾಯ ಕೇಳಿದ್ದಾರೆ. ಆದರೆ ಇದುವರೆಗೂ ಯಾವುದೇ ಉತ್ತರ ಬರದಿರುವುದು ಸರಕಾರದ ದಿವ್ಯ ನಿರ್ಲಕ್ಷವನ್ನು ಎತ್ತಿ ತೋರಿಸುತ್ತದೆ.