ಬ್ಯಾಂಕ್ ನಿಂದ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ಹಣ ದೋಚಿರುವ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹಣ ಡ್ರಾ ಮಾಡಿದಾಗ ಮಾತ್ರವಲ್ಲ ಇನ್ನು ಮುಂದೆ ಹಣ ಠೇವಣಿ ಇಡಲು ಬ್ಯಾಂಕ್ ಗೆ ಹೋದಾಗ ಕೂಡ ಎಚ್ಚರದಿಂದಿರಬೇಕು. ಯಾಕೆಂದ್ರೆ ಗ್ರಾಹಕರ ವೇಷದಲ್ಲಿ ಬರುವ ಕಳ್ಳರು ಬ್ಯಾಂಕ್ ನಲ್ಲಿಯೇ ನಿಮ್ಮ ಹಣ ದೋಚುತ್ತಾರೆ.
ಬ್ಯಾಂಕ್ ಗೆ ಗ್ರಾಹಕರ ವೇಷದಲ್ಲಿ ಬರುವ ಕಳ್ಳರು, ಹಣ ಠೇವಣಿ ಇಡಲು ಗ್ರಾಹಕರು ನಿಲ್ಲುವ ಜಾಗದಲ್ಲಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಕೈನಲ್ಲಿ ಕವರ್ ಹಿಡಿದು ನಿಲ್ಲುವ ಅವರ ಬಗ್ಗೆ ಯಾರಿಗೂ ಅನುಮಾನ ಬರುವುದಿಲ್ಲ. ಸಮಯ ನೋಡಿ ಮುಂದಿರುವ ವ್ಯಕ್ತಿಗಳ ಬ್ಯಾಗ್ ಗೆ ಕೈ ಹಾಕುವ ಕಳ್ಳರು ಸದ್ದಿಲ್ಲದೆ ಕಳ್ಳತನ ಮಾಡಿ ಪರಾರಿಯಾಗ್ತಾರೆ.
ಇಂತಹದ್ದೊಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮಾರ್ಚ್ 28,2016 ರಂದು ಚಾಂದನಿ ಚೌಕ್ ನ ಸ್ಟೇಟ್ ಬ್ಯಾಂಕ್ ನಲ್ಲಿ ಈ ಘಟನೆ ನಡೆದಿದೆ. ಸೋಗಾನಿ ಹೆಸರಿನ ವೃದ್ಧರೊಬ್ಬರ 76 ಸಾವಿರ ರೂಪಾಯಿ ಬ್ಯಾಂಕ್ ನಲ್ಲಿಯೇ ಕಳ್ಳತನವಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಬ್ಯಾಂಕ್ ಸಿಸಿ ಟಿವಿ ದೃಶ್ಯಗಳನ್ನು ತೆಗೆದು ನೋಡಲಾಗಿದೆ. ಆಗ ಕಳ್ಳರ ಕರಾಮತ್ತು ಗೊತ್ತಾಗಿದೆ. ಸದ್ಯ ಪೊಲೀಸರು ಗ್ರಾಹಕರ ವೇಷದಲ್ಲಿ ಬಂದ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.