ಕಳೆದ ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬರು ತಮ್ಮ ನಾಯಿಯನ್ನು ವಾಕ್ ಕರೆದುಕೊಂಡು ಹೋಗಿದ್ದ ವೇಳೆ ಐಷಾರಾಮಿ ವಾಹನದಲ್ಲಿ ಬಂದಿದ್ದ ದುಷ್ಕರ್ಮಿಗಳು ನಾಯಿಯನ್ನು ಅಪಹರಿಸಿದ್ದ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿತ್ತು. ಈ ಕುರಿತು ದೂರು ದಾಖಲಾಗಿದ್ದ ಹಿನ್ನಲೆಯಲ್ಲಿ ಬೆದರಿದ ಅಪಹರಣಕಾರರು ಮತ್ತದೇ ಜಾಗದಲ್ಲಿ ನಾಯಿಯನ್ನು ಕಟ್ಟಿಹಾಕಿ ಹೋಗಿದ್ದಾರೆ.
ದಕ್ಷಿಣ ದೆಹಲಿಯ ಪ್ರತಿಷ್ಟಿತ ವಸಂತ್ ಕುಂಜ್ ನಿವಾಸಿ ಅಫ್ತಾಬ್ ಖಾನ್ ಎಂಬವರ ಈ ನಾಯಿ ಅಪರೂಪದ ಸೈಬೀರಿಯನ್ ಹಸ್ಕಿ ತಳಿಗೆ ಸೇರಿದ್ದು, ದುಬಾರಿ ಬೆಲೆ ಇದೆ ಎನ್ನಲಾಗಿದೆ. ಹೀಗಾಗಿಯೇ ಹೊಂಚು ಹಾಕಿ ಕಾದಿದ್ದ ಅಪಹರಣಕಾರರು, ಶನಿವಾರ ಬೆಳಿಗ್ಗೆ ಅದರ ಮಾಲೀಕರು ನೋಡ ನೋಡುತ್ತಿದ್ದಂತೆಯೇ ತಮ್ಮ ಎಸ್.ಯು.ವಿ. ವಾಹನದಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು.
ಅಫ್ತಾಬ್ ಖಾನ್ ಈ ಕುರಿತು ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಇದರ ಫೋಟೋ ಹಾಕಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳಿಂದ ಬೆದರಿದ ದುಷ್ಕರ್ಮಿಗಳು ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ವಸಂತ್ ಕುಂಜ್ ಬಳಿಯ ಪಾರ್ಕ್ ನಲ್ಲಿದ್ದ ಕಂಬಕ್ಕೆ ನಾಯಿಯನ್ನು ಕಟ್ಟಿ ಹಾಕಿ ಹೋಗಿದ್ದಾರೆ. ಬೆಳಿಗ್ಗೆ ವಾಕಿಂಗ್ ಹೋದವರು ಇದನ್ನು ನೋಡಿ ಅಫ್ತಾಬ್ ಖಾನ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಧಾವಿಸಿ ಬಂದ ಅವರು ಈಗ ತಮ್ಮ ನಾಯಿಯನ್ನು ಮರಳಿ ಪಡೆದಿದ್ದು, ಪೊಲೀಸರು, ಅಪಹರಣಕಾರರನ್ನು ಬಂಧಿಸುವ ಕುರಿತು ತನಿಖೆ ಕೈಗೊಂಡಿದ್ದಾರೆ.