ವಿಶ್ವದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿರುವ ಕ್ರಿಕೆಟ್ ನಲ್ಲಿ ದಾಖಲೆಗಳನ್ನು ಮಾಡುವುದು, ಅವನ್ನು ಮತ್ತೊಬ್ಬರು ಮುರಿಯುವುದು ಸಾಮಾನ್ಯ. ಆದರೆ, ಅಪರೂಪದಲ್ಲಿಯೇ ಅಪರೂಪ ಎನ್ನಬಹುದಾದ ದಾಖಲೆಯೊಂದರ ಕುರಿತ ವರದಿ ಇಲ್ಲಿದೆ ನೋಡಿ.
ಆಸ್ಟ್ರೇಲಿಯಾದಲ್ಲಿ ನಡೆದ ಪ್ರಥಮ ದರ್ಜೆ ಪಂದ್ಯವೊಂದರಲ್ಲಿ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ. ಕೇವಲ ಒಂದೇ ಒಂದು ಎಸೆತದಲ್ಲಿ ಬರೋಬ್ಬರಿ 286 ರನ್ ಗಳಿಸಲಾಗಿದೆ. ಹೌದು 1893-94ನೇ ಸಾಲಿನಲ್ಲಿ ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಮತ್ತು ವಿಕ್ಟೋರಿಯಾ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ ಅಪರೂಪದ ದಾಖಲೆ ನಿರ್ಮಾಣವಾಗಿದೆ ಎನ್ನಲಾಗಿದ್ದು, ಈಗ ಬೆಳಕಿಗೆ ಬಂದಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ಬ್ಯಾಟ್ಸ್ ಮನ್ ಬಾರಿಸಿದ ಚೆಂಡು ಮೈದಾನದಲ್ಲಿದ್ದ ಮರವೊಂದರ ಕೊಂಬೆಯಲ್ಲಿ ಸಿಲುಕಿದೆ. ಬಾಲ್ ಕಾಣದಿದ್ದರೆ, ಹೊಸ ಬಾಲ್ ನಲ್ಲಿ ಪಂದ್ಯವನ್ನು ಮುಂದುವರೆಸಬಹುದಾಗಿತ್ತು. ಆದರೆ, ಕಣ್ಣಿಗೆ ಬಾಲ್ ಕಾಣಿಸುತ್ತಿದ್ದ ಕಾರಣ, ಅದೇ ಬಾಲ್ ನಲ್ಲಿ ಆಟವಾಡಬೇಕಿತ್ತು.
ಫೀಲ್ಡಿಂಗ್ ಮಾಡುತ್ತಿದ್ದ ವಿಕ್ಟೋರಿಯಾ ತಂಡದವರು ಬಾಲ್ ಇಳಿಸಲು ಪ್ರಯಾಸ ಪಡುತ್ತಿದ್ದರೆ, ಇತ್ತ ಕ್ರೀಸ್ ನಲ್ಲಿದ್ದ ಬ್ಯಾಟ್ಸ್ ಮನ್ ಗಳು 286 ರನ್ ಓಡಿದ್ದಾರೆ. ಕೊನೆಗೆ ಏರ್ ಗನ್ ಸಹಾಯದಿಂದ ಬಾಲ್ ಅನ್ನು ಕೆಳಗಿಸಲಾಯಿತಾದರೂ, ಅದನ್ನು ಯಾರೂ ಕ್ಯಾಚ್ ಹಿಡಿಯಲಿಲ್ಲ. ಬ್ಯಾಟ್ಸ್ ಮನ್ ಗಳು ಓಡಿದ್ದ 286 ರನ್ ಗಳಿಗೆ ಅಂಪೈರ್ ಗಳು ಮಾನ್ಯತೆ ನೀಡಿದ್ದಾರೆ. ಈ ಮೂಲಕ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ ಎಂದು ಹೇಳಲಾಗಿದೆ.