ರಾಜಸ್ಥಾನದ ಚಿತ್ತೋರ್ಗರ್ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಘಟನೆ ಅಲ್ಲಿನ ನಿವಾಸಿಗಳನ್ನು ಆತಂಕಕ್ಕೀಡು ಮಾಡಿದೆ. ಸ್ಮಶಾನದಲ್ಲಿ ಹೂತಿಟ್ಟಿರುವ ಶವಗಳನ್ನು ಹೊರ ತೆಗೆಯುತ್ತಿರುವ ದುಷ್ಕರ್ಮಿಗಳು ತಲೆಯನ್ನು ಕತ್ತರಿಸಿಕೊಂಡು ಹೋಗಿದ್ದಾರೆ.
ಚಿತ್ತೋರ್ಗರ್ ಜಿಲ್ಲೆಯ ಬೆಗು ಹಾಗೂ ನಂದ್ವಾಯಿ ಗ್ರಾಮಗಳ ಸ್ಮಶಾನದಲ್ಲಿ ಈ ಕೃತ್ಯವೆಸಗಲಾಗಿದ್ದು, ‘ಎಸ್’ ಎಂಬ ಅಕ್ಷರದಿಂದ ಆರಂಭವಾಗುವ ಹೆಸರಿರುವವರ ಶವಗಳನ್ನು ಹೂತಿಟ್ಟಿದ್ದ ಜಾಗವನ್ನು ಮಾತ್ರ ಅಗೆಯಲಾಗಿದ್ದು, ಇಬ್ಬರ ತಲೆಯನ್ನು ತೆಗೆದುಕೊಂಡು ಹೋಗಲಾಗಿದೆ. ಹಾಗಾಗಿ ಇದು ತಾಂತ್ರಿಕರ ಕಾರ್ಯವಿರಬಹುದೇ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ 12 ಗುಂಡಿಗಳನ್ನು ಅಗೆಯಲಾಗಿದೆ. ಬುಧವಾರ ಮತ್ತು ಗುರುವಾರ ಮಧ್ಯ ರಾತ್ರಿಯಲ್ಲಿಯೇ ಈ ಕೃತ್ಯ ನಡೆದಿದೆ. ಅಲ್ಲಿನ ನಿವಾಸಿಗಳು ಈ ಕುರಿತು ಈಗ ಪೊಲೀಸರಿಗೆ ದೂರು ಸಲ್ಲಿಸಿದ್ದಾರಲ್ಲದೇ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಚಿತ್ತೋರ್ಗರ್ ಜಿಲ್ಲಾಡಳಿತ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.