ಶಾಲಾ- ಕಾಲೇಜು ವ್ಯಾಸಂಗದ ವೇಳೆ ನೆಚ್ಚಿನ ಶಿಕ್ಷಕ- ಶಿಕ್ಷಕಿಯರಿಗೆ ಕೃತಜ್ಞತಾಪೂರ್ವಕವಾಗಿ ಸ್ವೀಟ್ ನೀಡುವುದು, ಸಣ್ಣ ಪುಟ್ಟ ಗಿಫ್ಟ್ ನೀಡಿರುವುದನ್ನು ನೋಡಿದ್ದೇವೆ. ಆದರೆ 5 ವರ್ಷದ ಈ ಬಾಲೆ ತನ್ನ ನರ್ಸರಿ ವ್ಯಾಸಂಗ ಯಶಸ್ವಿಯಾಗಿ ಪೂರೈಸಲು ಸಹಕಾರ ನೀಡಿದ ಶಿಕ್ಷಕಿಗೆ ಭಾರೀ ಬೆಲೆಯ ಗಿಫ್ಟ್ ನೀಡಿದ್ದಾಳೆ.
ಹೌದು, ಸಿರಿವಂತರ ನಾಡು ಕುವೈತ್ ನಲ್ಲಿ ಈ ಘಟನೆ ನಡೆದಿದೆ. ನೂರ್ ಅಲ್ ಫರೀಸ್ ಎಂಬ 5 ವರ್ಷದ ಈ ಪುಟ್ಟ ಬಾಲೆ, ತನ್ನ ನೆಚ್ಚಿನ ಶಿಕ್ಷಕಿ ನಾಡಿಯಾಗೆ ದುಬಾರಿ ಬೆಲೆಯ ಮರ್ಸಿಡೀಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾಳೆ. ಆಕೆ ತಾನು ಕೊಡುತ್ತಿರುವ ಕಾರಿನ ಬಾನೆಟ್ ಮೇಲೆ ಕುಳಿತಿದ್ದು, ಅದರ ಹಿಂದೆ ಅರೇಬಿಕ್ ನಲ್ಲಿ “This car is for my favourite teacher Nadia” ಎಂದು ಬರೆಯಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಾಲಕಿಯ ತಂದೆ, ಮಗಳು ತನ್ನ ತಾಯಿಯನ್ನು ಕಳೆದುಕೊಂಡ ವೇಳೆ ಶಿಕ್ಷಕಿ ನಾಡಿಯಾ ಆಕೆಯ ಕುರಿತು ಇನ್ನಿಲ್ಲದ ಕಾಳಜಿ ತೋರಿದ್ದರು. ತಮ್ಮ ಮಗಳು ಆ ನೋವಿನಿಂದ ಚೇತರಿಸಿಕೊಳ್ಳಲು ಶಿಕ್ಷಕಿಯ ಪಾತ್ರ ಮಹತ್ತರವಾಗಿದ್ದು, ಮಗಳು ಬಯಸಿದಂತೆ ಆಕೆಯ ನೆಚ್ಚಿನ ಶಿಕ್ಷಕಿಗೆ ಈ ಗಿಫ್ಟ್ ನೀಡುತ್ತಿರುವುದಾಗಿ ತಿಳಿಸಿದ್ದಾರೆ.