ನವದೆಹಲಿ: ಸೆಲೆಬ್ರಿಟಿಗಳೆಂದರೆ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಹೆಚ್ಚಿನ ನಿರೀಕ್ಷೆ ಇರುತ್ತದೆ. ಆದರೂ, ಕೆಲವೊಮ್ಮೆ ಸೆಲೆಬ್ರಿಟಿಗಳು ಯಡವಟ್ಟು ಮಾಡಿಕೊಂಡು ಬಿಡುತ್ತಾರೆ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ.
ಉದ್ಯಮಿಯೊಬ್ಬರಿಂದ ಬರೋಬ್ಬರಿ 5 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದ ನಟನೊಬ್ಬ, ಅದನ್ನು ಕೊಡದೇ ವಂಚಿಸಿದ ಪ್ರಕರಣದಲ್ಲಿ ನಟನಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಬಾಲಿವುಡ್ ನಟ ರಾಜ್ ಪಾಲ್ ಯಾದವ್ 2010ರಲ್ಲಿ ಉದ್ಯಮಿ ಎಂ.ಜಿ. ಅಗರ್ ವಾಲ್ ಅವರಿಂದ 5 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಅದನ್ನು ವಾಪಾಸ್ ಕೊಡದ ಕಾರಣ, ಅಗರ್ ವಾಲ್ ಕೋರ್ಟ್ ಮೊರೆ ಹೋಗಿದ್ದರು.
ಸುಳ್ಳು ಅಫಿಡವಿಟ್ ಸಲ್ಲಿಸಿದ್ದ ಕಾರಣಕ್ಕೆ ರಾಜ್ ಪಾಲ್ ಯಾದವ್ ವಿರುದ್ಧ 2013ರಲ್ಲಿ ಕೋರ್ಟ್ ವಿಧಿಸಿದ್ದ 10 ದಿನಗಳ ಶಿಕ್ಷೆಯಲ್ಲಿ 6 ದಿನ ಬಾಕಿ ಉಳಿಸಿಕೊಂಡಿದ್ದು, ಅದನ್ನು ಪೂರ್ಣಗೊಳಿಸುವಂತೆ ಕೋರ್ಟ್ ಸೂಚಿಸಿದೆ. ಜುಲೈ 15ರೊಳಗೆ ತಿಹಾರ್ ಜೈಲಿಗೆ ಶರಣಾಗಬೇಕೆಂದು ಕೋರ್ಟ್ ಆದೇಶ ನೀಡಿದೆ.