ಬಿಹಾರದ 12 ನೇ ತರಗತಿ ಫಲಿತಾಂಶದಲ್ಲಿ ಕಲಾ ವಿಭಾಗದ ಟಾಪರ್ ಆಗಿದ್ದ ರುಬಿ ರೈ, ನಂತರ ನಡೆದ ಮರು ಪರೀಕ್ಷೆಗೆ ಗೈರು ಹಾಜರಾಗುವ ಮೂಲಕ ಈ ಹಿಂದೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತೇ ಎಂಬ ಅನುಮಾನ ಹುಟ್ಟು ಹಾಕುವಂತೆ ಮಾಡಿದ್ದಾಳೆ.
12 ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ವೇಳೆ 500 ಕ್ಕೆ 444 ಅಂಕಗಳನ್ನು ಪಡೆದು ಟಾಪರ್ ಆಗಿದ್ದ ರುಬಿ ರೈಳನ್ನು ಮಾಧ್ಯಮದವರು ಸಂದರ್ಶಿಸಿದ ವೇಳೆ ಪೊಲಿಟಿಕಲ್ ಸೈನ್ಸ್ ಅನ್ನು Prodikal (political) science ಎಂದಿದ್ದಲ್ಲದೇ ಅದು ಅಡುಗೆಗೆ ಸಂಬಂಧಪಟ್ಟ ವಿಷಯ ಎಂದು ಹೇಳಿದ್ದಳು. ಟಾಪರ್ ವಿದ್ಯಾರ್ಥಿನಿಗೆ ತಾನು ಕಲಿತ ವಿಷಯದ ಕುರಿತೇ ಸ್ಪಷ್ಟತೆ ಇಲ್ಲದಿರುವಾಗ ಅದೇಗೆ ಟಾಪರ್ ಆದಳೆಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು.
ಜೊತೆಗೆ ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿದ್ದ ಸೌರಭ್ ಶ್ರೇಷ್ಟ 500 ಕ್ಕೆ 485 ಅಂಕ ಗಳಿಸಿದ್ದು, ತನ್ನ ಪಠ್ಯದ ವಿಷಯಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಸರಳ ಪ್ರಶ್ನೆಗಳಿಗೂ ಉತ್ತರ ನೀಡಲಾಗದೆ ತಡಬಡಾಯಿಸಿದ್ದ. ಕಾಕಾತಾಳೀಯವೆಂಬಂತೆ ರುಬಿ ರೈ ಹಾಗೂ ಸೌರಭ್ ಶ್ರೇಷ್ಟ ಇಬ್ಬರೂ ವೈಶಾಲಿ ಜಿಲ್ಲೆಯ ವಿ.ಆರ್. ಕಾಲೇಜಿನ ವಿದ್ಯಾರ್ಥಿಗಳು. ಪರೀಕ್ಷೆಯಲ್ಲಿ ಅಕ್ರಮ ನಡೆದಿರಬಹುದೆಂಬ ಮಾತುಗಳು ಕೇಳಿ ಬಂದ ಹಿನ್ನಲೆಯಲ್ಲಿ ಬಿಹಾರ ಸರ್ಕಾರ, ಟಾಪರ್ ಆಗಿದ್ದ 14 ಮಂದಿ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಆದೇಶಿಸಿತ್ತು. ಇದೀಗ ರುಬಿ ರೈ ಹೊರತುಪಡಿಸಿ ಉಳಿದೆಲ್ಲರೂ ಪರೀಕ್ಷೆಗೆ ಹಾಜರಾಗಿದ್ದು, ಆಕೆಯ ಫಲಿತಾಂಶವನ್ನು ತಡೆ ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.