ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಲಾರಿ, ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, 7 ಮಂದಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಸೂಳಗಿರಿ ಎಂಬಲ್ಲಿ ಕರ್ನಾಟಕದಿಂದ ಕೃಷ್ಣಗಿರಿಗೆ ಹೊರಟಿದ್ದ ಲಾರಿ ಎದುರಿನಿಂದ ಬರುತ್ತಿದ್ದ ರಂಗವಿಲಾಸ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು, ಪಕ್ಕದಲ್ಲಿ ಬರುತ್ತಿದ್ದ ಕಾರಿಗೆ ಗುದ್ದಿದೆ. ಮೂರೂ ವಾಹನಗಳು ಅತಿ ವೇಗವಾಗಿದ್ದ ಕಾರಣ, ಅಪಘಾತದ ತೀವ್ರತೆ ಹೆಚ್ಚಾಗಿದೆ. ಇದರಿಂದಾಗಿ 7 ಪುರುಷರು ಸೇರಿದಂತೆ 16 ಮಂದಿ ಮೃತಪಟ್ಟಿದ್ದಾರೆ. 30 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಗಾಯಾಳುಗಳಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸ್ಥಳಕ್ಕೆ ಕೃಷ್ಣಗಿರಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದು, ಪರಿಸ್ಥಿತಿ ನಿಭಾಯಿಸಿದ್ದಾರೆ.
ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ರಕ್ಷಿಸಿದ್ದು, ವಾಹನ ತೆರವುಗೊಳಿಸಿದ್ದಾರೆ. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 3 ಕಿಲೋಮೀಟರ್ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. 10ಕ್ಕೂ ಅಧಿಕ ಗಾಯಾಳುಗಳನ್ನು ಬೆಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ.