ಬಾಲಿವುಡ್ ನಟಿ ಕತ್ರೀನಾ ಕೈಫ್, ರಣಬೀರ್ ಕಪೂರ್ ಜೊತೆಗಿನ ಬ್ರೇಕ್ ಅಪ್ ಕಾರಣಕ್ಕಾಗಿ ಈ ಹಿಂದೆ ಸುದ್ದಿಯಾಗಿದ್ದರು. ಸಂಬಂಧವನ್ನು ಮತ್ತೇ ಜೋಡಿಸಲು ಕತ್ರೀನಾ ಪ್ರಯತ್ನಪಟ್ಟರೂ ರಣಬೀರ್ ನಿರ್ಲಕ್ಷಿಸಿದ ಕಾರಣ ತಾವೂ ಸುಮ್ಮನಾಗಿದ್ದರು.
ಆದರೆ ಇಬ್ಬರೂ ಜೊತೆಯಾಗಿ ನಟಿಸುತ್ತಿರುವ ‘ಜಗ್ಗಾ ಜಾಸೂಸ್’ ಚಿತ್ರದ ಚಿತ್ರೀಕರಣ ಮೊರಾಕ್ಕೊದಲ್ಲಿ ನಡೆದಿದೆ. ಇಬ್ಬರೂ ವೃತ್ತಿಪರರಂತೆ ಅದರಲ್ಲಿ ನಟಿಸಿದ್ದಾರೆ ಹೊರತು ಚಿತ್ರೀಕರಣದ ವೇಳೆ ಅಪ್ಪಿತಪ್ಪಿಯೂ ಮಾತನಾಡಿಲ್ಲವೆನ್ನಲಾಗಿದೆ. ಬೇರೆ ಬೇರೆ ವಿಮಾನಗಳಲ್ಲಿ ಮೊರಾಕ್ಕೊಗೆ ತೆರಳಿದ್ದ ಕತ್ರೀನಾ ಹಾಗೂ ರಣಬೀರ್ ಕಪೂರ್ ಚಿತ್ರೀಕರಣದ ಸ್ಥಳಕ್ಕೂ ಪ್ರತ್ಯೇಕವಾಗಿ ಆಗಮಿಸುತ್ತಿದ್ದಾರೆಂದು ಹೇಳಲಾಗಿದೆ.
‘ಜಗ್ಗಾ ಜಾಸೂಸ್’ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಕತ್ರೀನಾ ಕೈಫ್ ಮುಂಬೈಗೆ ಮರಳಿದ್ದಾರೆ. ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವುದನ್ನು ಅರಿತಿದ್ದ ವರದಿಗಾರರು ಅವರ ಪ್ರತಿಕ್ರಿಯೆಗಾಗಿ ಮುಗಿ ಬಿದ್ದಿದ್ದಾರೆ. ಅಂಗರಕ್ಷಕರಿಲ್ಲದೇ ಒಬ್ಬರೇ ವಿಮಾನ ನಿಲ್ದಾಣದಿಂದ ಹೊರ ಬಂದ ಕತ್ರೀನಾಗೆ ಅವರ ಕಾರು ಚಾಲಕ ಬೆಂಗಾವಲಾಗಿದ್ದಾನೆ. ಮಾಧ್ಯಮದವರ ಯಾವುದೇ ಪ್ರಶ್ನೆಗೂ ಪ್ರತಿಕ್ರಿಯೆ ನೀಡದ ಕತ್ರೀನಾ ಕಾರಿನಲ್ಲಿ ಹೋಗಿ ಕುಳಿತಿದ್ದಾರೆ. ಈ ವೇಳೆ ವರದಿಗಾರನೊಬ್ಬ ನಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದೇಕೆ ಎಂದು ಜೋರಾಗಿ ಪ್ರಶ್ನಿಸಿದ್ದಾನೆ. ಅದಕ್ಕೆ ಅಷ್ಟೇ ಕೂಲಾಗಿ ಉತ್ತರಿಸಿದ ಕತ್ರೀನಾ, ನಿಮ್ಮಗಳಿಗೆ ಬರುವಂತೆ ನಾನೇನು ಕರೆ ಕಳುಹಿಸಿಲ್ಲವೆಂಬ ಖಡಕ್ ಉತ್ತರ ನೀಡಿ ಅಲ್ಲಿಂದ ತೆರಳಿದ್ದಾರೆ.