ಆಟದ ಮೈದಾನದಲ್ಲಿ ಈ ಹಿಂದೆ ಸದಾ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದ ಆಸ್ಟ್ರೇಲಿಯನ್ ಕ್ರಿಕೆಟರ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡದ ಯಶಸ್ವಿ ನಾಯಕ ಡೇವಿಡ್ ವಾರ್ನರ್ ಈಗ ಸಂಪೂರ್ಣವಾಗಿ ಬದಲಾಗಿದ್ದಾರೆ.
ಆಕ್ರಮಣಕಾರಿ ಆಟದ ಜೊತೆಗೆ ತಮ್ಮ ಮುಂಗೋಪ ಹಾಗೂ ಅಶಿಸ್ತಿನ ನಡವಳಿಕೆಗೂ ವಾರ್ನರ್ ಖ್ಯಾತರಾಗಿದ್ದರು. 2013 ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಕುಡಿತದ ನಶೆಯಲ್ಲಿ ಆಟಗಾರ ಜೋರೂಟ್ ಮೇಲೆ ಹಲ್ಲೆ ಮಾಡಿದ್ದರು. ಅಲ್ಲದೇ ಮೈದಾನದ ಹೊರಗಿನ ತಮ್ಮ ನಡವಳಿಕೆಗಳಿಂದ ಸಾಕಷ್ಟು ಹೆಸರು ಕೆಡಿಸಿಕೊಂಡಿದ್ದರು.
ತಮ್ಮ ಕುಡಿತದ ಚಟವೇ ವೃತ್ತಿ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವುದನ್ನು ಅರಿತ ವಾರ್ನರ್, ಕಳೆದ ಒಂದು ವರ್ಷದಿಂದ ಮದ್ಯಪಾನ ತ್ಯಜಿಸಿದ್ದರು. ಬಳಿಕ ಕ್ರಿಕೆಟ್ ನತ್ತಲೇ ತಮ್ಮ ಗಮನ ಕೇಂದ್ರೀಕರಿಸಿದ್ದ ವಾರ್ನರ್, ಈಗ ಅದಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಲ್ಲದೇ ತಂಡ ಚೊಚ್ಚಲ ಬಾರಿಗೆ ಟ್ರೋಫಿಯನ್ನು ಪಡೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ವಾರ್ನರ್ ಸಕಾಲಕ್ಕೆ ಎಚ್ಚೆತ್ತು ತಮ್ಮ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದೇ ಇಂದಿನ ಯಶಸ್ಸಿಗೆ ಕಾರಣವೆಂಬುದು ಕ್ರಿಕೆಟ್ ಅಭಿಮಾನಿಗಳ ಅನಿಸಿಕೆಯಾಗಿದೆ.