ಲಂಡನ್: ಕೆಲವರಿಗೆ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎನ್ನುವುದನ್ನು ಕೇಳಿರುತ್ತೀರಿ. ಅದಕ್ಕೆ ಅತ್ಯತ್ತಮ ಉದಾಹರಣೆ ಆಗಬಹುದಾದ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ. ಕೂಲಿ ಕಾರ್ಮಿಕನಿಗೆ ಲಾಟರಿಯಲ್ಲಿ ಬರೋಬ್ಬರಿ 9.8 ಕೋಟಿ ರೂ. ಬಹುಮಾನ ಬಂದಿದೆ.
ಮ್ಯಾಂಚೆಸ್ಟರ್ ನಿವಾಸಿಯಾಗಿರುವ 25 ವರ್ಷದ ಕಾರ್ಲ್ ಕ್ರೂಕ್ ಎಂಬಾತ ರಸ್ತೆ ಕಾಮಗಾರಿ ಕೆಲಸ ಮಾಡುತ್ತಿದ್ದು, ಆತ 5 ಪೌಂಡ್(490 ರೂ.) ಕೊಟ್ಟು ಖರೀದಿಸಿದ್ದ ಸ್ಕ್ರಾಚ್ ಕಾರ್ಡ್ ಗೆ ಬರೋಬ್ಬರಿ 9.8 ಕೋಟಿ ರೂಪಾಯಿ ಬಹುಮಾನ ಬಂದಿದೆ. ಕೆಲಸ ಮಾಡುವ ಸಂದರ್ಭದಲ್ಲಿ ಬೇಗೆಯಾಗಿದ್ದು, ಸಮೀಪದಲ್ಲೇ ಇದ್ದ ಅಂಗಡಿಗೆ ಹೋಗಿ ತಂಪು ಪಾನೀಯ ಕುಡಿದ ಕಾರ್ಲ್ ಕ್ರೂಕ್ 5 ಪೌಂಡ್ ಕೊಟ್ಟು ಸ್ಕ್ರಾಚ್ ಕಾರ್ಡ್ ಖರೀದಿಸಿದ್ದಾರೆ.
ಅದಕ್ಕೆ ಭಾರೀ ಮೊತ್ತದ ಬಹುಮಾನವೇ ಬಂದಿದೆ. ಇದರಿಂದ ಕಾರ್ಲ್ ಕ್ರೂಕ್ ತಲೆಕೆಡಿಸಿಕೊಂಡಿಲ್ಲ. ಮಾರನೇ ದಿನವೇ ಕೆಲಸಕ್ಕೆ ಹಾಜರಾಗಿ, ಎಲ್ಲರೊಂದಿಗೆ ಕೆಲಸ ಮಾಡಿದ್ದಾನೆ. ಅಂದ ಹಾಗೇ ಕಾರ್ಲ್ ಗೆ ಆಡಿ ಆರ್.ಎಸ್.7 ಕಾರ್ ಖರೀದಿಸುವ ಆಸೆ ಇದ್ದು, ಅದನ್ನು ನನಸಾಗಿಸಿಕೊಳ್ಳುವುದಾಗಿ ಹೇಳಿದ್ದಾರೆ.