ರಾಜಸ್ಥಾನದಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಕಾಲೇಜು ಸೇರಬಯಸುವ ವಿದ್ಯಾರ್ಥಿಗಳು ರಕ್ತದಾನ ಮಾಡಿರುವ ಸರ್ಟಿಫಿಕೇಟ್ ತೋರಿಸಿದರೆ ದಾಖಲಾತಿ ವೇಳೆ ಹೆಚ್ಚುವರಿಯಾಗಿ ಶೇ.1 ರಷ್ಟು ಅಂಕ ನೀಡಲಾಗುತ್ತದೆ.
ವಿದ್ಯಾರ್ಥಿಗಳನ್ನು ಸಮಾಜಮುಖಿ ಕಾರ್ಯಗಳತ್ತ ಪ್ರೇರೇಪಿಸಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಕಾಳಿಚರಣ್ ಸರಾಫ್, ಸರ್ಕಾರದ ಅಥವಾ ಸರ್ಕಾರದಿಂದ ಅನುಮತಿ ಪಡೆದಿರುವ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದಾನ ಮಾಡುವ ವಿದ್ಯಾರ್ಥಿಗಳು ಅಲ್ಲಿ ತಾವು ಪಡೆದಿರುವ ಸರ್ಟಿಫಿಕೇಟ್ ಅನ್ನು ಸರ್ಕಾರಿ ಕಾಲೇಜಿಗೆ ದಾಖಲಾಗುವ ವೇಳೆ ಸಲ್ಲಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಶೇ.1 ಅಂಕ ನೀಡಲಾಗುತ್ತದೆ ಎಂದಿದ್ದಾರೆ.
ಇದರ ಜೊತೆಗೆ ಮೂರು ಮಂದಿ ಅನಕ್ಷರಸ್ಥರಿಗೆ ವಿದ್ಯಾರ್ಥಿಗಳು ಅಕ್ಷರ ಕಲಿಸಿದರೆ ಅಂತಹ ವಿದ್ಯಾರ್ಥಿಗಳಿಗೆ ಶೇ. 0.5 ರಷ್ಟು ಹೆಚ್ಚುವರಿ ಅಂಕ ನೀಡಲಾಗುವುದೆಂದು ತಿಳಿಸಲಾಗಿದೆ. ಸರ್ಕಾರದ ಈ ತೀರ್ಮಾನಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ ಎನ್ನಲಾಗಿದೆ.