ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ, ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಟೀಲ್ ಬ್ರಿಡ್ಜ್ ಗೆ ಚೆನ್ನೈ ಹಸಿರು ನ್ಯಾಯಾಧೀಕರಣ ತಡೆಯಾಜ್ಞೆ ನೀಡಿದೆ.
ಬೆಂಗಳೂರಿನ ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳ ಫ್ಲೈ ಓವರ್ ವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಬಿ.ಡಿ.ಎ. ಮೂಲಕ ಕಾಮಗಾರಿ ಕೈಗೊಂಡಿತ್ತು. ಎಲ್ ಅಂಡ್ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ನವೆಂಬರ್ 1 ರಿಂದ ಕಾಮಗಾರಿ ಆರಂಭಿಸಲು ಸಿದ್ಧತೆಗಳನ್ನು ನಡೆಸಲಾಗಿದೆ. ಈ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆಸಲಾಗಿತ್ತು.
ಪರಿಸರಕ್ಕೆ ಮಾರಕವಾಗಿರುವ ಈ ಯೋಜನೆಯನ್ನು ಜಾರಿಗೊಳಿಸಬಾರದು. ಇದರಿಂದಾಗಿ ಸುಮಾರು 800 ಮರಗಳನ್ನು ಕಡಿಯಲಿದ್ದು, ಬೆಂಗಳೂರಿನ ಪರಿಸರಕ್ಕೆ ಮಾರಕವಾದ ಯೋಜನೆಯನ್ನು ಕೈಬಿಡಬೇಕೆಂದು ಒತ್ತಾಯಿಸಲಾಗಿತ್ತು. ಆದರೆ, ಯೋಜನೆ ಜಾರಿಗೆ ಸರ್ಕಾರ ಕ್ರಮ ಕೈಗೊಂಡಿತ್ತು.
ಇದನ್ನು ವಿರೋಧಿಸಿ ಚೆನ್ನೈ ಹಸಿರು ನ್ಯಾಯಾಧೀಕರಣ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಕರಣ 4 ವಾರ ತಡೆಯಾಜ್ಞೆ ನೀಡಿದೆ. ಪರಿಸರ ಇಲಾಖೆಯಿಂದ ಅನುಮತಿ ಪಡೆಯಲಾಗಿದೆಯೇ? ಎಂದು ಪ್ರಶ್ನಿಸಿದ್ದು, ಪರಿಸರ ಉಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ ಎಂದು ಹೇಳಲಾಗಿದೆ.