ಗೋ ರಕ್ಷಕರೆಂದು ಹೇಳಿಕೊಂಡು ರಾಜಸ್ಥಾನದಿಂದ ದೆಹಲಿಗೆ ಕುರಿ ಮತ್ತು ಮೇಕೆಗಳನ್ನು ಸಾಗಿಸುತ್ತಿದ್ದವರ ಬಳಿ ಹಣ ವಸೂಲಿ ಮಾಡುತ್ತಿದ್ದ ಮೂವರನ್ನು ರೇವರಿ ಪೊಲೀಸರು ಬಂಧಿಸಿದ್ದಾರೆ. ರಿಜಿಸ್ಟ್ರೇಶನ್ ಪ್ಲೇಟ್ ಇಲ್ಲದ ಮಹಿಂದ್ರಾ ಬೊಲೆರೋ ವಾಹನದಲ್ಲಿ ಇವರು ಪ್ರಯಾಣಿಸುತ್ತಿದ್ರು.
130 ಕುರಿಗಳನ್ನು ಹೊತ್ತು ಬರುತ್ತಿದ್ದ ಕ್ಯಾಂಟರ್ ಅಡ್ಡಗಟ್ಟಿ, ತಾವು ಗೋರಕ್ಷಕರು ಅಂತಾ ಪೋಸ್ ಕೊಟ್ಟು 25,000 ರೂಪಾಯಿ ಕೊಡುವಂತೆ ಒತ್ತಾಯಿಸಿದ್ರು. ನೀವು ಗೋವುಗಳನ್ನೂ ಸಾಗಿಸುತ್ತೀರಿ ಎಂದು ಬೆದರಿಸಿದ ಆರೋಪಿಗಳು, ಇಬ್ಬರನ್ನು ತಮ್ಮ ಬೊಲೆರೊ ವಾಹನದಲ್ಲಿ ಕೂಡಿ ಹಾಕಿದ್ರು. ಅವರ ಬಳಿಯಿದ್ದ ಮೊಬೈಲ್ ಕಿತ್ತುಕೊಂಡು, 25,000 ರೂಪಾಯಿ ಕೊಟ್ರೆ ಬಿಡೋದಾಗಿ ಬೆದರಿಸ್ತಾ ಇದ್ರು. ಖದೀಮರ ಕೈಗೆ ಸಿಕ್ಕಿದ್ದ ಇಬ್ಬರೂ ಸಹಾಯಕ್ಕಾಗಿ ಕೂಗಿಕೊಂಡಿದ್ದು, ನೈಟ್ ಬೀಟ್ ಪೊಲೀಸರಿಗೆ ಕೇಳಿಸಿದೆ.
ನಕಲಿ ಗೋ ರಕ್ಷಕರಾದ ಮನೋಜ್ ಕುಮಾರ್, ದೇವೇಂದ್ರ ಕುಮಾರ್, ಮತ್ತು ಅರ್ಜುನ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಇಂತಹ ನಕಲಿ ಗೋ ರಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದರು.