ಮೈಸೂರು: ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ, ಪ್ರಿಯಕರನ ಕುಟುಂಬದವರ ಮೇಲೆ ಹಲ್ಲೆ ನಡೆಸಲು ಸುಫಾರಿ ಕೊಟ್ಟಿದ್ದ ಯುವತಿಯನ್ನು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿ ಹಾಗೂ ಸಿರಾಜ್ ಎಂಬುವವರು ಪ್ರೀತಿಸಿದ್ದರು. ಇದಕ್ಕೆ ಸಿರಾಜ್ ತಾಯಿ ಒಪ್ಪದೇ ಯುವತಿಯನ್ನು ಮನೆಗೆ ಕರೆಸಿ ಬುದ್ಧಿವಾದ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಿರಾಜ್ ತಾಯಿಯ ಸಹೋದರ, ಪಾಲಿಕೆ ಗುತ್ತಿಗೆದಾರ ಮುಕ್ತಿಯಾರ್, ಅವರ ಪುತ್ರ ಮೊಹಿನ್ ಅಹಮದ್ ಜೊತೆಗಿದ್ದರು. ಮುಕ್ತಿಯಾರ್ ಮತ್ತು ಮೊಹಿನ್ ಅಹಮದ್ ಬುದ್ಧಿವಾದ ಹೇಳಿದ್ದರಿಂದ ಕೆರಳಿದ ಯುವತಿ, ಫೋನ್ ಮಾಡಿ ಬೆದರಿಕೆ ಹಾಕಿದ್ದಾಳೆ.
ನಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರೆ ನಿಮಗೆ ಗತಿ ಕಾಣಿಸುತ್ತೇನೆ ಎಂದು ಆಕೆ ಬೆದರಿಕೆ ಹಾಕಿದ ಆಡಿಯೋ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಮುಕ್ತಿಯಾರ್ ಮತ್ತು ಅವರ ಪುತ್ರ ಮೊಹಿನ್ ಅಹಮದ್ ಮೇಲೆ ಹಲ್ಲೆ ನಡೆಸಲು ಯುವತಿ ಸುಫಾರಿ ಕೊಟ್ಟಿದ್ದಾಳೆ ಎನ್ನಲಾಗಿದ್ದು, ನರಸಿಂಹರಾಜ ಠಾಣೆ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾದ ಮುಕ್ತಿಯಾರ್ ಮತ್ತು ಅವರ ಪುತ್ರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.