ಪ್ರೀತಿಯ ಎಮ್ಮೆಯನ್ನು ಮಾರಾಟ ಮಾಡು ಎಂದಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಗುಂಡು ಹಾರಿಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದ ಪೊವಾಯನ್ ನಲ್ಲಿ ನಡೆದಿದೆ. ಕೆಲ ತಿಂಗಳುಗಳ ಹಿಂದೆ ಮಹೇಂದ್ರ ಕುಮಾರ್ ಮತ್ತಾತನ ಪತ್ನಿ ಮಾಯಾದೇವಿ ಎಮ್ಮೆಯೊಂದನ್ನು ಖರೀದಿಸಿದ್ದರು. ಹಾಲು ಮಾರಾಟ ಮಾಡಿ ಹಣ ಸಂಪಾದಿಸಬೇಕು ಅನ್ನೋದು ಅವರ ಉದ್ದೇಶ.
ಆದ್ರೆ ಎಮ್ಮೆಯ ಆರೈಕೆ ಮಾಡೋದು ಮಾಯಾದೇವಿಗೆ ಕಷ್ಟವಾಗ್ತಿತ್ತು. ಒಂದು ವಾರದಿಂದ ಎಮ್ಮೆಯನ್ನು ಮಾರಿಬಿಡಬೇಕೆಂದು ಮಾಯಾದೇವಿ ಒತ್ತಾಯಿಸುತ್ತಿದ್ಲು. ಇದೇ ವಿಚಾರಕ್ಕೆ ನಿನ್ನೆ ಜಗಳ ನಡೆದಿದೆ. ಕಿತ್ತಾಟ ತಾರಕಕ್ಕೇರುತ್ತಿದ್ದಂತೆ ಸಿಟ್ಟಿನ ಭರದಲ್ಲಿ ಮಹೇಂದ್ರ ಕುಮಾರ್ ತನ್ನ ಬಂದೂಕಿನಿಂದ ಪತ್ನಿ ಮಾಯಾದೇವಿ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಮಾಯಾದೇವಿ ಲಖ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅವಳ ಸ್ಥಿತಿ ಚಿಂತಾಜನಕವಾಗಿದೆ ಅಂತಾ ಪೊಲಿಸರು ಮಾಹಿತಿ ನೀಡಿದ್ದಾರೆ. ಇತ್ತ ಪತ್ನಿ ಮೇಲೆ ಗುಂಡು ಹಾರಿಸಿದ ಮಹೇಂದ್ರ ಕುಮಾರ್ ತಲೆಮರೆಸಿಕೊಂಡಿದ್ದಾನೆ.