ಬಾಲಿವುಡ್ ಸೂಪರ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ಸಲ್ಮಾನ್ ಖಾನ್ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ.
ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ರಾಜಸ್ತಾನ ಸರ್ಕಾರ, ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಸಲ್ಮಾನ್ ಖಾನ್ ಅವರಿಗೆ ಶರಣಾಗುವಂತೆ ಸೂಚನೆ ನೀಡಬೇಕೆಂದು ಮನವಿ ಮಾಡಲಾಗಿದೆ. 1998 ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದಾರೆ ಎಂಬ ಆರೋಪ ಸಲ್ಮಾನ್ ಖಾನ್ ಮೇಲಿದ್ದು, ರಾಜಸ್ತಾನ ಹೈಕೋರ್ಟ್ ಅವರನ್ನು ನಿರ್ದೋಷಿ ಎಂದು ಕಳೆದ ಜುಲೈನಲ್ಲಿ ತೀರ್ಪು ನೀಡಿದೆ.
ಈ ತೀರ್ಪನ್ನು ಪ್ರಶ್ನಿಸಿ ರಾಜಸ್ತಾನ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದೆ. ಅಂದಿನ ಘಟನೆಯ ಪ್ರಮುಖ ಸಾಕ್ಷಿಯಾಗಿದ್ದ ಕಾರ್ ಚಾಲಕ ಹರೀಶ್, ಕೆಲದಿನಗಳ ಹಿಂದೆ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದರು. ಅದಾದ ನಂತರದಲ್ಲಿ ರಾಜಸ್ತಾನ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದು, ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.