ಒಬ್ಬಳು ಹೆಂಡತಿಯನ್ನು ಸಂಭಾಳಿಸೋದ್ರಲ್ಲಿ ಎಲ್ರೂ ಸುಸ್ತಾಗ್ತಾರೆ. ಆದ್ರೆ ನೈಜೀರಿಯಾದಲ್ಲೊಬ್ಬ ಮಹಾನ್ ಪತಿಯಿದ್ದಾನೆ, ಅವನಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 97 ಪತ್ನಿಯರಿದ್ದಾರೆ. ಅಷ್ಟಕ್ಕೂ ಅವನೇನು ಹದಿಹರೆಯದ ಯುವಕನಲ್ಲ, ಅವನಿಗೆ ಈಗ 92 ವರ್ಷ.
ನೈಜೀರಿಯಾದ ಬಿಡಾ ಜಿಲ್ಲೆಯ ಮೊಹಮ್ಮದ್ ಬೆಲ್ಲೋ ಅಬುಬಕರ್ ಒಬ್ಬ ಮುಸ್ಲಿಂ ಪಾದ್ರಿ. ಇದುವರೆಗೆ 107 ಮಹಿಳೆಯರನ್ನು ಮದುವೆಯಾಗಿದ್ದಾನೆ, ಅವರಲ್ಲಿ 10 ಜನರಿಗೆ ವಿಚ್ಛೇದನ ಕೊಟ್ಟಿರೋದ್ರಿಂದ ಸದ್ಯ ಬೆಲ್ಲೋ 97 ಹೆಂಡಿರ ಗಂಡ. ಬೆಲ್ಲೋಗೆ ವಯಸ್ಸಾಗಿದೆ, ಸಾವು ಹತ್ತಿರ ಬರ್ತಿದೆ ಅಂತಾ ಎಲ್ರೂ ಮಾತನಾಡಿಕೊಳ್ತಿದ್ರೆ, ನಾನಿನ್ನೂ ಆರೋಗ್ಯವಾಗಿದ್ದೇನೆ, ಇನ್ನಷ್ಟು ಮದುವೆ ಮಾಡಿಕೊಳ್ಳಲು ರೆಡಿ ಅಂತಿದ್ದಾನೆ ಈತ.
ಅಸಲಿಗೆ ನಾಲ್ಕು ಮದುವೆಯಾಗಲು ಅಲ್ಲಿ ಅವಕಾಶವಿದೆ, ಅವರನ್ನು ಸರಿಸಮನಾಗಿ ನೋಡಿಕೊಳ್ಳುವ ಸಾಮರ್ಥ್ಯವಿದ್ದರೆ ಮಾತ್ರ. ಆದ್ರೆ ಇಷ್ಟೊಂದು ವಿವಾಹ ಮಾಡಿಕೊಳ್ತಾ ಇರೋದು ದೈವಿಕ ಉದ್ದೇಶವೊಂದನ್ನು ಪೂರ್ಣಗೊಳಿಸಲು ಅಂತಾ ಬೆಲ್ಲೋ ಹೇಳಿಕೊಳ್ತಾನೆ. 2008 ರ ವೇಳೆಗೆ 86 ಪತ್ನಿಯರನ್ನು ಹೊಂದಿದ್ದ ಬೆಲ್ಲೋ ವಿಶ್ವದಾದ್ಯಂತ ಸುದ್ದಿ ಮಾಡಿದ್ದ.
ದೇವರ ಆದೇಶದ ಮೇರೆಗೆ ಮದುವೆಯಾಗಿದ್ದೇನೆ ಎಂದಿದ್ದ ಅವನನ್ನು ಬಂಧಿಸಲಾಗಿತ್ತು. ಆ ಸಂದರ್ಭದಲ್ಲಿದ್ದ 86 ಪತ್ನಿಯರ ಪೈಕಿ 82 ಮಂದಿಗೆ ವಿಚ್ಛೇದನ ನೀಡಬೇಕೆಂಬ ಷರತ್ತಿನ ಮೇರೆಗೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಆದ್ರೆ ಕೋರ್ಟ್ ಆದೇಶಕ್ಕೆ ಕಿಮ್ಮತ್ತು ಕೊಡದ ಬೆಲ್ಲೋ, 97 ಪತ್ನಿಯರನ್ನು ಹೊಂದಿದ್ದಾನೆ, ಈಗ ಅವನಿಗೆ 180 ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಸಾಯೋವರೆಗೂ ಮದುವೆ ಆಗ್ತಾನೇ ಇರ್ತೀನಿ ಎನ್ನುತ್ತಾನೆ ಬೆಲ್ಲೋ. ಅದೇನೇ ಆದ್ರೂ ಇವನನ್ನು ನಂಬಿ ಬಂದಿರುವ ಆ ಮಹಿಳೆಯರ ಕಥೆ ಏನಾಗಬಹುದು ಅನ್ನೋದೇ ಎಲ್ಲರ ಪ್ರಶ್ನೆ.