ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಮೂಲಕ ಅಪರಿಚಿತರೂ ಅತ್ಮೀಯರಾಗುತ್ತಾರೆ. ಇದರಿಂದ ಕೆಲವರಿಗೆ ಒಳ್ಳೆಯದಾದರೆ ಮತ್ತೆ ಹಲವರು ವಂಚನೆಗೂ ಒಳಗಾಗುತ್ತಾರೆ. ಹೀಗೆ ಫೇಸ್ ಬುಕ್ ಮೂಲಕ ಪರಿಚಯವಾದವನಿಂದ ಯುವತಿಯೊಬ್ಬಳು ವಂಚನೆಗೀಡಾಗಿದ್ದಾಳೆ.
ಯುವತಿಯೊಬ್ಬಳಿಗೆ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ತಾನು ಅಮೆರಿಕಾ ನಿವಾಸಿ ಎಂದು ಆತ ಹೇಳಿಕೊಂಡಿದ್ದು, ಪ್ರತಿ ನಿತ್ಯ ಚಾಟ್ ಮಾಡುತ್ತಾ ಇಬ್ಬರು ಪರಸ್ಪರ ಅತ್ಮೀಯರಾಗಿದ್ದಾರೆ. ಒಂದು ದಿನ ಯುವತಿ ಮುಂದೆ ಆತ ಮದುವೆಯ ಪ್ರಸ್ತಾಪವನ್ನಿಟ್ಟಿದ್ದಾನೆ.
ಅಮೆರಿಕಾ ನಿವಾಸಿಯಾಗುವ ಆಸೆ ಹೊತ್ತ ಈ ಯುವತಿ ಒಪ್ಪಿಗೆ ಸೂಚಿಸಿದ್ದಲ್ಲದೇ ಕೂತಲ್ಲೇ ಬಣ್ಣ ಬಣ್ಣದ ಕನಸು ಕಂಡಿದ್ದಾಳೆ. ಆಕೆಯೊಂದಿಗೆ ಚಾಟ್ ಮಾಡುವ ವೇಳೆ ಆತ ತಾನು ಗಿಫ್ಟ್ ಕಳುಹಿಸುತ್ತಿರುವುದಾಗಿ ತಿಳಿಸಿದ್ದಾನೆ. ಇದರಿಂದ ಉಬ್ಬಿ ಹೋದ ಯುವತಿ, ತನ್ನ ವಿಳಾಸ ನೀಡಿದ್ದಾಳೆ. ಕೆಲ ದಿನಗಳ ಬಳಿಕ ವ್ಯಕ್ತಿಯೊಬ್ಬ ಆಕೆಗೆ ಕರೆ ಮಾಡಿ ಅಮೆರಿಕಾದಿಂದ ಪಾರ್ಸೆಲ್ ಒಂದು ಬಂದಿರುವುದಾಗಿ ಹೇಳಿದ್ದಾನೆ.
ಇದು ತನ್ನ ಭಾವಿ ಪತಿ ಕಳುಹಿಸಿರುವ ಗಿಫ್ಟ್ ಎಂದು ಯುವತಿ ಭಾವಿಸಿದ್ದಾಳೆ. ಕರೆ ಮಾಡಿದ ವ್ಯಕ್ತಿ ಈ ಪಾರ್ಸೆಲ್ ಅಮೆರಿಕಾದಿಂದ ಬಂದಿರುವ ಕಾರಣ ಕಸ್ಟಮ್ಸ್ ಶುಲ್ಕ ಕಟ್ಟಬೇಕೆಂದು ತಿಳಿಸಿದ್ದಾನೆ. ಆದರಂತೆ ಈ ಯುವತಿ ಆತ ಹೇಳಿದ್ದ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾಳೆ. ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡಿದ್ದ ವ್ಯಕ್ತಿ ಮತ್ತೆ ಈ ಯುವತಿಗೆ ಕರೆ ಮಾಡಿ ಮತ್ತಷ್ಟು ಹಣ ಹಾಕಲು ಹೇಳಿದ್ದಾನೆ.
ಈ ವೇಳೆ ಯುವತಿಗೆ ಅನುಮಾನ ಬಂದಿದೆ. ಮತ್ತೇ ಮತ್ತೇ ಹಣ ಕೇಳುತ್ತಿದ್ದ ಕಾರಣ ಚಾಟ್ ನಲ್ಲಿ ಸಿಕ್ಕ ತನ್ನ ಸ್ನೇಹಿತನಿಗೆ ವಿಷಯ ತಿಳಿಸಿದ್ದಾಳೆ. ಆಗ ಆತ, ತಾನು ಗಿಫ್ಟ್ ಜೊತೆಗೆ ಅಮೆರಿಕಾ ಡಾಲರ್ ಸಹ ಕಳುಹಿಸಿರುವುದಾಗಿ ತಿಳಿಸಿದ್ದಾನೆ. ಆಗ ಯುವತಿಗೆ ತಾನು ಮೋಸ ಹೋಗಿರುವುದು ಖಚಿತವಾಗಿದೆ. ತಾನು ಅಮೆರಿಕಾದಲ್ಲಿರುವುದಾಗಿ ಹೇಳಿಕೊಂಡಿದ್ದ ವ್ಯಕ್ತಿ, ಭಾರತದಿಂದಲೇ ಚಾಟ್ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಅಲ್ಲದೇ ಆತ ಫೇಸ್ ಬುಕ್ ನಕಲಿ ಖಾತೆ ಮೂಲಕ ವಂಚನೆ ಎಸಗಿರುವುದು ಬಯಲಾಗಿದೆ.