ಕಾರವಾರ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ, ಅಪಾಯಕ್ಕೆ ಸಿಲುಕಿದ್ದ 30 ಮಂದಿಯನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ.
ಗೋಪಿಚಂದ್ ಎಂಬುವರಿಗೆ ಸೇರಿದ ರಾಜೇಶ್ವರಿ ಕೃಪ ಬೋಟ್ ನಲ್ಲಿ 30 ಮಂದಿ, ಮೀನುಗಾರಿಕೆಗೆ ತೆರಳಿದ್ದು, ಕಾರವಾರದಿಂದ 13 ನಾಟಿಕಲ್ ಮೈಲು ದೂರದಲ್ಲಿ ಮೀನು ಹಿಡಿಯುವ ಸಂದರ್ಭದಲ್ಲಿ ಬೋಟ್ ನಲ್ಲಿ ರಂಧ್ರವಾಗಿ ನೀರು ನುಗ್ಗತೊಡಗಿದೆ. ನೀರು ನುಗ್ಗಿದ್ದರಿಂದ 30 ಮಂದಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಮಾಹಿತಿ ತಲುಪಿದೆ.
ಕೂಡಲೇ ಸ್ಪೀಡ್ ಬೋಟ್ ಮೂಲಕ ತೆರಳಿದ ಎಸ್. ಎಂ. ರಾಣೆ ನೇತೃತ್ವದ ಕರಾವಳಿ ಕಾವಲು ಪಡೆ ಸಿಬ್ಬಂದಿ, ಸಂಕಷ್ಟಕ್ಕೆ ಸಿಲುಕಿದ್ದ 30 ಮೀನುಗಾರರನ್ನು ಬೋಟ್ ಸಮೇತ ದಡ ಸೇರಿಸಿದ್ದಾರೆ.