ಶಿವಮೊಗ್ಗ: ಚಲಿಸುತ್ತಿದ್ದ ಕಾರಿನೊಳಗೆ ನಾಗರಹಾವು ಸೇರಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ನಡೆದಿದೆ.
ಸಾಗರದ ಬಿ.ಹೆಚ್. ರಸ್ತೆಯಲ್ಲಿ ವ್ಯಕ್ತಿಯೊಬ್ಬರು, ಪತ್ನಿ ಮಕ್ಕಳೊಂದಿಗೆ ವ್ಯಾಗನರ್ ಕಾರಿನಲ್ಲಿ ಹೋಗುವಾಗ, ನಾಗರ ಹಾವೊಂದು ಅಡ್ಡ ಬಂದಿದೆ. ರಸ್ತೆ ದಾಟುತ್ತಿದ್ದ ನಾಗರಹಾವು ಮುಂದೆ ಹೋಗಲಿ ಎಂದು ಕಾರು ನಿಲ್ಲಿಸಿದ್ದಾರೆ. ಆದರೆ, ಹಾವು ಸೀದಾ ಕಾರಿನೊಳಗೆ ನುಗ್ಗಿದ್ದು, ಇದರಿಂದ ಗಾಬರಿಯಾದ ಕಾರಿನಲ್ಲಿದ್ದವರು ಕೆಳಗೆ ಇಳಿದಿದ್ದಾರೆ. ಬಳಿಕ ಸ್ನೇಕ್ ಮನ್ಮಥ್ ಅವರನ್ನು ಕರೆಸಿ ಹಾವನ್ನು ಸೆರೆ ಹಿಡಿಯಲಾಗಿದೆ.
ಕಾರಿನಲ್ಲಿದ್ದ ಹಾವನ್ನು ಸೆರೆ ಹಿಡಿದ ಸ್ನೇಕ್ ಮನ್ಮಥ್, ಅದನ್ನು ಸಮೀಪದ ಕಾಡಿಗೆ ಬಿಟ್ಟಿದ್ದಾರೆ. ಕಾರಿನ ಮಾಲೀಕರು ಅಲ್ಲಿಂದ ಪ್ರಯಾಣ ಮುಂದುವರೆಸಿದ್ದಾರೆ.