ಪ್ರಧಾನ ಮಂತ್ರಿ ನರೇಂದ್ರ ಮೋದಿ, ಐಶ್ ಬಾಗ್ ರಾಮಲೀಲಾ ಮೈದಾನದಲ್ಲಿ ಭಯೋತ್ಪಾದನೆಯ ವಿರುದ್ಧ ಗುಡುಗಿದ್ದಾರೆ. ಭಯೋತ್ಪಾದಕರನ್ನು ಹುಟ್ಟು ಹಾಕುತ್ತಿರುವ ಪಾಕಿಸ್ತಾನದ ವಿರುದ್ಧವೂ ಪ್ರಧಾನಿ ಕಿಡಿಕಾರಿದ್ದಾರೆ. ಚಕ್ರಧಾರಿ ಕೃಷ್ಣನ ಮಾರ್ಗ ಅನುಸರಿಸಲು ನಾವು ಸಿದ್ಧ ಎನ್ನುವ ಮೂಲಕ ಯುದ್ಧಕ್ಕೆ ನಾವು ಸಿದ್ಧ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ದಾರೆ.
‘ಸರ್ಜಿಕಲ್ ಸ್ಟ್ರೈಕ್’ ನಂತ್ರ ಇದೇ ಮೊದಲ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಾರ್ವಜನಿಕ ಸ್ಥಳದಲ್ಲಿ ಮಾತನಾಡಿದ್ರು. ಈ ವೇಳೆ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು. ಆತಂಕವಾದಿಗಳ ಬೇರನ್ನು ಬುಡದಿಂದಲೇ ಕಿತ್ತೊಗೆಯಬೇಕು ಎಂದ ಮೋದಿ, ಆತಂಕವಾದಿಗಳನ್ನು ಸಲಹುತ್ತಿರುವವರಿಗೆ ತಕ್ಕ ಪಾಠ ಕಲಿಸಬೇಕೆಂದ್ರು.
ಕೃಷ್ಣ ಹಾಗೂ ಬುದ್ಧ ಇಬ್ಬರ ದೇಶವೂ ಭಾರತವೇ. ಆದ್ರೆ ನಾವು ಬುದ್ಧ ತೋರಿಸಿದ ದಾರಿಯಲ್ಲಿ ಸಾಗುತ್ತಿದ್ದೇವೆ. ಬಲವಂತಪಡಿಸಿದ್ರೆ ನಾವು ಚಕ್ರಧಾರಿ ಕೃಷ್ಣನ ದಾರಿ ಅನುಸರಿಸಲು ಸಿದ್ಧ. ಭಯೋತ್ಪಾದನೆ ಯಾವ ದೇಶವನ್ನೂ ಬಿಟ್ಟಿಲ್ಲ. ಕೆಲವೊಮ್ಮೆ ಯುದ್ಧ ಅನಿವಾರ್ಯ ಎಂದ ಪ್ರಧಾನಿ, ಭಯೋತ್ಪಾದನೆಯನ್ನು ಬುಡದಿಂದ ಕಿತ್ತೊಗೆಯಲು ದೇಶದ ಜನರೆಲ್ಲ ಒಂದಾಗಬೇಕೆಂದು ಕರೆ ನೀಡಿದ್ರು.
‘ಬೇಟಿ ಬಚಾವೋ’ ಆಂದೋಲನದ ಬಗ್ಗೆ ಮಾತನಾಡಿದ ಮೋದಿ, ನಾವು ಹೆಣ್ಣು ಮಕ್ಕಳನ್ನು ಉಳಿಸಬೇಕು. ಗರ್ಭದಲ್ಲಿಯೇ ಹೆಣ್ಣು ಭ್ರೂಣವನ್ನು ಕಿವುಚಿ ಹಾಕುವ ರಾವಣರ ದಹನವಾಗಬೇಕೆಂದು ಕರೆ ನೀಡಿದ್ರು. ಪುರಾತನ ರಾಮಲೀಲಾ ಮೈದಾನದಲ್ಲಿ ದಸರಾ ಆಚರಿಸುತ್ತಿರುವುದು ನನಗೆ ಖುಷಿ ನೀಡಿದೆ ಎಂದ್ರು.