ಬೆಂಗಳೂರು: ಮೊಹರಂ ಮೆರವಣಿಗೆಯಲ್ಲೇ, ಯುವಕನೊಬ್ಬನನ್ನು ಸ್ಕ್ರೂ ಡ್ರೈವರ್ ನಿಂದ ಚುಚ್ಚಿ, ಭೀಕರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾತ್ರಿ ಮೊಹರಂ ಹಬ್ಬದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಅಜ್ಮಲ್ ಎಂಬ ಯುವಕನನ್ನು ಯುವಕರ ಗುಂಪೊಂದು ಸುತ್ತುವರೆದು, ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಿದೆ. ಮೆರವಣಿಗೆಯಲ್ಲಿ ಕುಸಿದು ಬಿದ್ದ ಅಜ್ಮಲ್ ನನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ. ಕೊಲೆ ಪ್ರಕರಣ ದಾಖಲಿಸಿಕೊಂಡ ಕೆ.ಆರ್. ಪುರಂ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ನಯಾಜ್, ಸುಹೇಲ್, ಖಾದೀರ್ ಎಂಬ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಮೃತನ ತಮ್ಮ, ಬಂಧಿತ ಯುವಕರೊಂದಿಗೆ ಜಗಳವಾಡಿಕೊಂಡಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.