ಭಾರೀ ಶ್ರೀಮಂತರೊಬ್ಬರ ಪುತ್ರ ತನ್ನ ಬಿಎಂಡಬ್ಲ್ಯೂ ಕಾರಿನಲ್ಲಿ ಕಾಲೇಜಿಗೆ ಹೋಗುತ್ತಿರುವ ವೇಳೆ ಪೊಲೀಸರ ವೇಷದಲ್ಲಿ ಬಂದು ಆತನನ್ನು ಅಪಹರಿಸಿ 50 ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಬೇಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆಪ್ಟೆಂಬರ್ 27 ರಂದು ದೆಹಲಿಯಲ್ಲಿ ಈ ಅಪಹರಣ ಪ್ರಕರಣ ನಡೆದಿದ್ದು, 19 ವರ್ಷದ ಯುವಕ ಕಾರಿನಲ್ಲಿ ಹೋಗುವ ವೇಳೆ ಸ್ಕಾರ್ಪಿಯೋದಲ್ಲಿ ಬಂದವರು ಪೊಲೀಸರಂತೆ ನಟಿಸಿ ಆತನನ್ನು ಠಾಣೆಗೆ ಕರೆದೊಯ್ಯುವ ನೆಪದಲ್ಲಿ ಅಪಹರಿಸಿದ್ದರಲ್ಲದೇ ಯುವಕನ ಬಿಡುಗಡೆಗೆ 50 ಕೋಟಿ ರೂಪಾಯಿ ನೀಡುವಂತೆ ಆತನ ತಂದೆ ಬಳಿ ಬೇಡಿಕೆ ಇಟ್ಟಿದ್ದರು.
ಐದು ದಿನಗಳ ಕಾಲ ಮಾತುಕತೆ ನಡೆಸಿದ ಬಳಿಕ ಅಪಹೃತ ಯುವಕನ ತಂದೆಯಿಂದ 1 ಕೋಟಿ ರೂ. ಒತ್ತೆ ಹಣವನ್ನು ಪಡೆದು ಅಕ್ಟೋಬರ್ 4 ರಂದು ಯುವಕನನ್ನು ಬಿಡುಗಡೆಗೊಳಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಪಹರಣಕಾರರ ಪೈಕಿ ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ಹಲವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರುಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.