ಇಡೀ ದೇಶದ ಗಮನ ಸೆಳೆದಿದ್ದ, ಗೋವಾದ ಉದ್ಯಮಿ ಮೋನಿಕಾ ಗುರ್ಡೆ ಅವರ ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಬಾಯ್ಬಿಟ್ಟ ರಹಸ್ಯ ಇಲ್ಲಿದೆ ನೋಡಿ.
ಸುಗಂಧ ದ್ರವ್ಯ ಉದ್ಯಮದಲ್ಲಿ ಹೆಸರು ಮಾಡಿದ್ದ ಮೋನಿಕಾ ಗುರ್ಡೆ ಅವರನ್ನು ಕೊಲೆ ಮಾಡಿದ್ದು, ಪಂಜಾಬ್ ಮೂಲದ ಯುವಕ ರಾಜೇಶ್ ಅಲಿಯಾಸ್ ರಾಜ್ ಕುಮಾರ್ ಸಿಂಗ್. ಮೋನಿಕಾ ಅವರು ವಾಸವಾಗಿದ್ದ ಸಪ್ನಾ ರಾಜ್ ವ್ಯಾಲಿ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ರಾಜ್ ಕುಮಾರ್ ಅಕ್ಟೋಬರ್ 5 ರಂದು ಸಂಜೆ ಮೋನಿಕಾ ಫ್ಲ್ಯಾಟ್ ಗೆ ನುಗ್ಗಿ ಅವರನ್ನು ಕೊಲೆ ಮಾಡಿದ್ದ.
ಮೋನಿಕಾ ಫ್ಲ್ಯಾಟ್ ಗೆ ನುಗ್ಗಿದ ರಾಜ್ ಕುಮಾರ್ ಅವರ ಕೈ, ಕಾಲು ಕಟ್ಟಿ ಹಾಕಿದ್ದಾನೆ. ಆಕೆಯೊಂದಿಗೆ ವಾಗ್ವಾದ ನಡೆಸಿದ್ದು, ನಂತರ ಹಣ ಬೇಕೆಂದು ಪೀಡಿಸಿದ್ದಾನೆ. ಹಣವಿಲ್ಲದ ಕಾರಣ, ಮೋನಿಕಾ ಎ.ಟಿ.ಎಂ. ಕಾರ್ಡ್ ಕೊಟ್ಟು ಪಾಸ್ ವರ್ಡ್ ಹೇಳಿದ್ದಾರೆ. ಅವರಿಗೆ ಜೀವ ಉಳಿದರೆ ಸಾಕಾಗಿದ್ದರಿಂದ ತಮ್ಮ ಐಫೋನ್ ಕೂಡ ಕೊಟ್ಟಿದ್ದಾರೆ. ಇವೆಲ್ಲವನ್ನು ಪಡೆದುಕೊಂಡ ಕಿರಾತಕ, ಮನೆಯಲ್ಲಿದ್ದ ವೈನ್ ಕುಡಿದ ಆತನಿಗೆ ಅಮಲು ಏರಿದೆ.
ಕಾದಾಟದಲ್ಲಿ ಬಟ್ಟೆ ಹರಿದಿದ್ದ ಮೋನಿಕಾರ ಮೇಲೆ ಕಣ್ಣು ಹಾಕಿದ್ದಾನೆ. ಅವರ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾನೆ. ಈ ಸಂದರ್ಭದಲ್ಲಿ ತಾನು ತಂದಿದ್ದ ಚಾಕುವನ್ನು ಹಾಸಿಗೆ ಪಕ್ಕದಲ್ಲೇ ಇಟ್ಟಿದ್ದಾನೆ ಆರೋಪಿ. ಇದನ್ನು ಕಂಡ ಮೋನಿಕಾ, ಚಾಕು ತೆಗೆದುಕೊಳ್ಳಲು ಮುಂದಾಗುತ್ತಿದ್ದಂತೆ, ಆಕೆಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಬಳಿಕ ಸ್ನಾನ ಮುಗಿಸಿ, 3.30ರ ಸುಮಾರಿಗೆ ಮನೆಯಿಂದ ಹೊರಗೆ ಬಂದಿದ್ದಾನೆ. ಎ.ಟಿ.ಎಂ. ನಲ್ಲಿ ಹಣ ಡ್ರಾ ಮಾಡಿಕೊಂಡು ಗೋವಾದಿಂದ ರೈಲಿನಲ್ಲಿ ಮಂಗಳೂರಿಗೆ ಬಂದಿದ್ದಾನೆ. ಈ ವೇಳೆಗೆ ಗೋವಾ ಪೊಲೀಸರು ಮೋನಿಕಾ ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ದೇಶದ ಗಮನ ಸೆಳೆದಿದ್ದ ಮೋನಿಕಾ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿ, ನಾಪತ್ತೆಯಾಗಿದ್ದ ಮೋನಿಕಾ ಎ.ಟಿ.ಎಂ. ಕಾರ್ಡ್, ಐಫೋನ್ ಮತ್ತು ಸೆಕ್ಯುರಿಟಿ ಗಾರ್ಡ್ ರಾಜ್ ಕುಮಾರ್ ಗಾಗಿ ಹುಡುಕಾಟ ನಡೆಸಿದ್ದಾರೆ.
ಮೋನಿಕಾ ಅವರನ್ನು ಕೊಲೆ ಮಾಡಿದ ರಾಜ್ ಕುಮಾರ್, ಮಂಗಳೂರಿನಲ್ಲಿ ಮತ್ತೆ ಹಣ ಡ್ರಾ ಮಾಡಿಕೊಂಡು, ಬಸ್ ನಲ್ಲಿ ಬೆಂಗಳೂರಿಗೆ ಬಂದು, ಕಾಟನ್ ಪೇಟೆಯ ಲಾಡ್ಜ್ ಒಂದರಲ್ಲಿ ತಂಗುತ್ತಾನೆ. ಗಾಂಧಿ ಬಜಾರ್ ನ ಬಟ್ಟೆ ಅಂಗಡಿಗಳಿಗೆ ತೆರಳಿ ತನಗೆ ಬೇಕಾದ ಬಟ್ಟೆಗಳಿಗಾಗಿ ಹುಡುಕಾಡಿ, ಆಕ್ಸೆಂಬರ್ಗ್ ಶೋ ರೂಂ ನಲ್ಲಿ 24,000 ರೂ. ಮೌಲ್ಯದ ಬಟ್ಟೆ ಖರೀದಿಸಿ, ಮೋನಿಕಾ ಎಟಿಎಂ ಕಾರ್ಡ್ ಬಳಸಿ ಸ್ವೈಪ್ ಮಾಡಿ ಹಣ ಪಾವತಿಸುತ್ತಾನೆ.
ಅಲ್ಲಿಗೆ ಆರೋಪಿ ಬೆಂಗಳೂರಿನಲ್ಲಿರುವುದು ಕನ್ಫರ್ಮ್ ಆಗುತ್ತಿದ್ದಂತೆ ಗೋವಾ ಪೊಲೀಸರು, ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಬಸವನಗುಡಿ ಠಾಣೆ ಪೊಲೀಸರು, ಬಟ್ಟೆ ಅಂಗಡಿಯಲ್ಲಿ ವಿಚಾರಿಸಿ, ಸುತ್ತಮುತ್ತಲಿನ ಲಾಡ್ಜ್ ಗಳಲ್ಲಿ ವಿಚಾರಿಸುತ್ತಾರೆ. ಆರೋಪಿ ತಂಗಿದ್ದ ಲಾಡ್ಜ್ ನ ರೂಂ ನಂಬರ್ 202 ರಲ್ಲಿ ಆತನನ್ನು ಸೆರೆ ಹಿಡಿಯುತ್ತಾರೆ.
ವಿಚಾರಣೆ ಸಂದರ್ಭದಲ್ಲಿ ರಾಜ್ ಕುಮಾರ್ ಬಾಯ್ಬಿಟ್ಟ ರಹಸ್ಯ ಹೀಗಿದೆ. ಮೋನಿಕಾ ವಾಸವಾಗಿದ್ದ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಆರೋಪಿ, ವಸ್ತುಗಳನ್ನು ಕಳವು ಮಾಡುತ್ತಿದ್ದ. ಹೀಗೆ ಮೋನಿಕಾ ಅವರ ಇಷ್ಟವಾದ ಕೊಡೆಯೊಂದನ್ನು ಎಗರಿಸಿದ್ದ. ತನ್ನ ಕೊಡೆ, ರಾಜ್ ಕುಮಾರ್ ಬಳಿ ಇರುವುದನ್ನು ಕಂಡ ಮೋನಿಕಾ ಅಪಾರ್ಟ್ ಮೆಂಟ್ ನಿರ್ವಹಣಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಈ ಮೊದಲೇ ರಾಜ್ ಕುಮಾರ್ ವಿರುದ್ಧ ಅನೇಕ ದೂರು ಬಂದಿದ್ದ ಹಿನ್ನಲೆಯಲ್ಲಿ ಕೆಲಸದಿಂದ ತೆಗೆಯಲಾಗಿತ್ತು. ಆದರೆ, ಆತನಿಗೆ ಬರಬೇಕಿದ್ದ 22,000 ರೂ. ಬಾಕಿ ಹಣ ಕೊಟ್ಟಿರಲಿಲ್ಲ. ತನಗೆ ಹಣ ಸಿಗದಿರಲು ಮೋನಿಕಾ ಅವರೇ ಕಾರಣ ಎಂದು ಭಾವಿಸಿದ ರಾಜ್ ಕುಮಾರ್, ಅವರಿಂದ ಹಣ ಪಡೆಯಲು ಯೋಚಿಸಿದ್ದಾನೆ.
ಅಕ್ಟೋಬರ್ 5 ರ ಸಂಜೆ 6.30 ರಿಂದ ಬೆಳಗಿನ ಜಾವ 3.30 ರ ವರೆಗೆ ಮೋನಿಕಾ ಮನೆಯಲ್ಲಿದ್ದು, ಅವರ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎಟಿಎಂ ಕಾರ್ಡ್, ಐಫೋನ್ ದೋಚಿದ್ದಾನೆ. ಎ.ಟಿ.ಎಂ. ಕಾರ್ಡ್ ಮೂಲಕ ಹಣ ಡ್ರಾ ಮಾಡಿ ಸಿಕ್ಕಿಬಿದ್ದಿದ್ದಾನೆ. ಆತ ಬೆಂಗಳೂರಿನಿಂದ ಪಂಜಾಬ್ ಗೆ ಹೋಗಿದ್ದರೆ, ಬಂಧಿಸುವುದು ಕಷ್ಟವಾಗುತ್ತಿತ್ತು. ಗೋವಾದ ಪೊಲೀಸರು ನೀಡಿದ ಮಾಹಿತಿ ಆಧರಿಸಿ, ಕಾರ್ಯಾಚರಣೆ ನಡೆಸಿದ ಬೆಂಗಳೂರು ಪೊಲೀಸರು ಆರೋಪಿ ರಾಜ್ ಕುಮಾರ್ ನನ್ನು ಬಂಧಿಸಿದ್ದಾರೆ.