ಶಾಲೆಗೆ ಬೂಟು ಧರಿಸಿ ಬಂದಿಲ್ಲ ಎಂಬ ಕಾರಣಕ್ಕೆ 3ನೇ ತರಗತಿ ಬಾಲಕನಿಗೆ ಶಿಕ್ಷಕರು ಚಪ್ಪಲಿ ಹಾರ ಹಾಕಿದ ಘಟನೆ ಉತ್ತರಪ್ರದೇಶದ ಮುಝಫರ್ ನಗರ ಬಳಿಯ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.
ಆ ಬಾಲಕ ವಿಕಲಚೇತನನಾಗಿದ್ದು, ಅವನ ಬಲಗೈ ಮತ್ತು ಬಲಗಾಲು ಬಾಗಿಕೊಂಡಿದೆ. ಹಾಗಾಗಿ ಪ್ರತಿನಿತ್ಯ ಶೂ ಧರಿಸುವುದು ಅಸಾಧ್ಯ, ಶೂ ಹಾಕಿಕೊಂಡಲ್ಲಿ ಅವನಿಗೆ ನಡೆಯುವುದು ಇನ್ನೂ ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಬಾಲಕ ಶನಿವಾರ ಚಪ್ಪಲಿ ಧರಿಸಿ ಶಾಲೆಗೆ ಬಂದಿದ್ದ. ಇದನ್ನು ನೋಡಿ ಸಿಟ್ಟಿಗೆದ್ದ ಶಿಕ್ಷಕರು ಅವನ ಚಪ್ಪಲಿಯಿಂದ ಹಾರ ಮಾಡಿ ಅದನ್ನು ವಿದ್ಯಾರ್ಥಿಯ ಕೊರಳಿಗೆ ತೊಡಿಸಿ ಶಾಲೆಯ ಸುತ್ತ ಪರೇಡ್ ಮಾಡಿಸಿದ್ದಾರೆ.
ಇದರಿಂದ ತಮ್ಮ ಮಗನ ಮೇಲೆ ಮಾನಸಿಕ ಒತ್ತಡ ಉಂಟಾಗಿದ್ದು, ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಾಲಕನ ತಂದೆ ವೀರೇಂದ್ರ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ. ಆದ್ರೆ ಶಾಲಾ ಆಡಳಿತ ಮಂಡಳಿ ಈ ಆರೋಪವನ್ನು ನಿರಾಕರಿಸಿದೆ, ಅವರು ಇದುವರೆಗೂ ಶಾಲಾ ಶುಲ್ಕ ಕಟ್ಟಿಲ್ಲ, ಸುಮ್ಮನೆ ಸಲ್ಲದ ಆರೋಪ ಹೊರಿಸುತ್ತಿದ್ದಾರೆ ಅಂತಾ ದೂರಿದೆ. ಈ ಬಗ್ಗೆ ಕಾಂಡ್ಲಾ ಪೊಲೀಸರು ತನಿಖೆ ಮಾಡ್ತಿದ್ದಾರೆ.