ಉತ್ತರ ಪ್ರದೇಶ ಪೊಲೀಸರ ಮತ್ತೊಂದು ಕ್ರೌರ್ಯ ಬಯಲಾಗಿದೆ. ನೊಯ್ಡಾ ಪೊಲೀಸರು ಬಾಲಾಪರಾಧಿಗಳ ಕಾಯ್ದೆ ಉಲ್ಲಂಘಿಸಿ ನೇಪಾಳದ 16 ವರ್ಷದ ಬಾಲಕನನ್ನು ಒಂದು ವರ್ಷ ಜೈಲಿನಲ್ಲಿಟ್ಟಿದ್ದಾರೆ.
ಬಂಧಿತನಾದಾಗ ಆ ಬಾಲಕನ ವಯಸ್ಸು 15, ಆದ್ರೆ ಪೊಲೀಸರು ಎಫ್ಐಆರ್ ನಲ್ಲಿ ಬಾಲಕನ ವಯಸ್ಸನ್ನೇ ನಮೂದಿಸಿರಲಿಲ್ಲ. ಪೊಲೀಸರು ಮಾಡಿದ ಪ್ರಮಾದದಿಂದಾಗಿ ಆತ ಒಂದು ವರ್ಷ ಜೈಲಿನಲ್ಲಿ ಅತ್ಯಾಚಾರಿಗಳು, ಕೊಲೆಗಡುಕರ ಜೊತೆ ಕಾಲ ಕಳೆದಿದ್ದಾನೆ. ತಾನಿನ್ನೂ ಅಪ್ರಾಪ್ತನೆಂದು ಅದೆಷ್ಟು ಬಾರಿ ಹೇಳಿದ್ರೂ ನೊಯ್ಡಾ ಪೊಲೀಸರು ಕ್ಯಾರೇ ಅಂದಿಲ್ಲ.
ಅರೆಸ್ಟ್ ಮಾಡಿದಾಗ ಆತನ ಬಳಿ ಯಾವುದೇ ಗುರುತಿನ ಚೀಟಿ ಇರಲಿಲ್ಲ, ಹಾಗಾಗಿ ಆತನ ವಯಸ್ಸೆಷ್ಟು ಅನ್ನೋದು ಗೊತ್ತಿರಲಿಲ್ಲ ಅಂತಾ ಪೊಲೀಸರು ವಾದಿಸಿದ್ದಾರೆ. ಸತ್ಯ ಪ್ರಕಾಶ್ ಎಂಬುವವರು ನೇಪಾಳದ ಬಾಲಕನ ಪರವಾಗಿ ಕಾನೂನು ಹೋರಾಟಕ್ಕಿಳಿದಿದ್ದಾರೆ. ವಯಸ್ಸು ಗೊತ್ತಿಲ್ಲ ಅನ್ನೋದಾದ್ರೆ ಎಲುಬಿನ ಪರೀಕ್ಷೆ ನಡೆಸಬಹುದಿತ್ತು ಅಂತಾ ಅಭಿಪ್ರಾಯಪಟ್ಟಿದ್ದಾರೆ. ಹರಿಯಾಣದಿಂದ ನೊಯ್ಡಾಕ್ಕೆ ಮದ್ಯ ಮತ್ತು ಗಾಂಜಾ ಸಾಗಣೆ ಮಾಡಿದ ಆರೋಪದ ಮೇಲೆ ಬಾಲಕನನ್ನು ಕಳೆದ ವರ್ಷ ಬಂಧಿಸಲಾಗಿತ್ತು.