ತನ್ನ ನಗ್ನ ಸೆಲ್ಫಿಗಳಿಂದ ಸದಾ ಸುದ್ದಿಯಲ್ಲಿರುವ ಹಾಲಿವುಡ್ ನ ರಿಯಾಲಿಟಿ ಷೋ ಸ್ಟಾರ್ ಕಿಮ್ ಕರ್ದಾಶಿಯನ್ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾಳೆ. ಪ್ಯಾರಿಸ್ ನಲ್ಲಿ ನಡೆಯಲಿದ್ದ ಷೋ ಒಂದರಲ್ಲಿ ಭಾಗವಹಿಸಲು ಕಿಮ್ ಕರ್ದಾಶಿಯನ್ ಪ್ಯಾರಿಸ್ ಗೆ ಬಂದಿದ್ದ ವೇಳೆ ಮುಸುಕುಧಾರಿಗಳಾಗಿದ್ದ ಇಬ್ಬರು ಯುವಕರು ಆಕೆ ತಂಗಿದ್ದ ಹೋಟೆಲ್ ಕೊಠಡಿಗೆ ತೆರಳಿ ಗನ್ ತೋರಿಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಹೋಟೆಲ್ ಕೋಣೆಯಲ್ಲಿ ಕಿಮ್ ಕರ್ದಾಶಿಯನ್ ಒಬ್ಬರೇ ಇದ್ದ ವೇಳೆ ಇವರುಗಳು ನುಗ್ಗಿದ್ದು, ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಿಮ್ ಕರ್ದಾಶಿಯನ್ ಅಪರಿಚಿತರು ಏಕಾಏಕಿ ಕೋಣೆಯೊಳಗೆ ನುಗ್ಗುತ್ತಿದ್ದಂತೆಯೇ ಬೆಚ್ಚಿ ಬಿದ್ದಿದ್ದಾರೆ. ದುಷ್ಕರ್ಮಿಗಳು ಗನ್ ತೋರಿಸುತ್ತಿದ್ದಂತೆಯೇ ತೀವ್ರ ಭೀತಿಗೊಂಡ ಆಕೆ, ತಮ್ಮ ಬಳಿಯಿದ್ದ ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾರೆ. ಘಟನೆಯಲ್ಲಿ ಕಿಮ್ ಕರ್ದಾಶಿಯನ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲವಾದರೂ ಘಟನೆಯಿಂದ ಶಾಕ್ ಗೊಳಗಾಗಿದ್ದಾರೆ. ಅಲ್ಲದೇ ತಾವು ತೆರಳಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿದರೆಂದು ತಿಳಿದುಬಂದಿದೆ.
ವಾರದ ಹಿಂದಷ್ಟೇ ಅಭಿಮಾನಿಯೆಂದು ಹೇಳಿಕೊಂಡವನೊಬ್ಬ ಸಾರ್ವಜನಿಕ ಸ್ಥಳದಲ್ಲೇ ಕಿಮ್ ಕರ್ದಾಶಿಯನ್ ಅವರನ್ನು ಚುಂಬಿಸಲು ಯತ್ನಿಸಿದ್ದು, ಅದಾದ ಬಳಿಕ ಈ ಘಟನೆ ನಡೆದಿರುವುದು ಕರ್ದಾಶಿಯನ್ ರನ್ನು ದಿಗ್ಬ್ರಮೆಗೊಳ್ಳುವಂತೆ ಮಾಡಿದೆ ಎನ್ನಲಾಗಿದೆ. ನ್ಯೂಯಾರ್ಕ್ ನಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿಮ್ ಕರ್ದಾಶಿಯನ್ ಪತಿ, ಅದನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದರೆಂದು ಹೇಳಲಾಗಿದೆ.