ತನ್ನ ಕುಟುಂಬದ ಜೀವನ ನಿರ್ವಹಣೆಗೆ ಆಧಾರವಾಗಿದ್ದ ಎತ್ತು ಮೃತಪಟ್ಟ ವೇಳೆ ರೈತನೊಬ್ಬ ಅದರ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದಲ್ಲದೇ 13 ನೇ ದಿನದ ತಿಥಿ ಸಂದರ್ಭದಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಊಟ ಹಾಕಿಸಿದ್ದಾನೆ.
ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಸಿಕ್ರೊರಾ ಭೂರ್ ಗ್ರಾಮದ ರೈತ ಪಪ್ಪು ಯಾದವ್, 12 ವರ್ಷಗಳ ಹಿಂದೆ ತಾನು ಕೊಂಡುಕೊಂಡಿದ್ದ ‘ರಾಮು’ ಎಂದು ಪ್ರೀತಿಯಿಂದ ಕರೆಯಲಾಗುತ್ತಿದ್ದ ಎತ್ತನ್ನು ಸ್ವಂತ ಮಗನಂತೆ ಸಾಕಿದ್ದ. ಪಪ್ಪು ಯಾದವ್ ಕುಟುಂಬ ನಿರ್ವಹಣೆಗೆ ಈ ಎತ್ತಿನ ಕೊಡುಗೆಯೂ ಇದ್ದು, ಕೆಲ ದಿನಗಳ ಹಿಂದೆ ಇದು ಅನಾರೋಗ್ಯಕ್ಕೊಳಗಾಗಿತ್ತು.
ಇದರ ಶುಶ್ರೂಷೆಗೆ ಆಸ್ಪತ್ರೆಗೆ ಅಲೆದಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ‘ರಾಮು’ ಸಾವನ್ನಪ್ಪಿತ್ತು. ‘ರಾಮು’ ವಿನ ಸಾವಿನಿಂದ ಮನನೊಂದಿದ್ದ ಪಪ್ಪು ಯಾದವ್ ಕುಟುಂಬ, ಅದನ್ನು ಕುಟುಂಬದ ಒಬ್ಬ ಸದಸ್ಯನೆಂದೇ ಪರಿಗಣಿಸಿದ್ದ ಹಿನ್ನಲೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿತ್ತು. 13 ನೇ ದಿನದ ತಿಥಿಯಂದು ‘ರಾಮು’ ವಿನ ತಿಥಿ ಕಾರ್ಡ್ ಪ್ರಿಂಟ್ ಮಾಡಿಸಿದ್ದ ಪಪ್ಪು ಯಾದವ್, ಗ್ರಾಮಸ್ಥರಿಗೆಲ್ಲ ಹಂಚಿದ್ದಲ್ಲದೇ ಸಾವಿರಕ್ಕೂ ಅಧಿಕ ಮಂದಿಗೆ ತಿಥಿ ಊಟ ಹಾಕಿಸಿದ್ದಾನೆ.