ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಕೆಲ ಜಿಲ್ಲೆಗಳಲ್ಲಿ ಸುರಿದ ಕುಂಭದ್ರೋಣ ಮಳೆ ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಮಳೆಯಿಂದ ಉಂಟಾದ ಪ್ರವಾಹದಿಂದಾಗಿ 10 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರಲ್ಲದೇ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಆಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಮಳೆಯಿಂದಾಗಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಂತಹ ಪರಿಸ್ಥಿತಿಯಲ್ಲೂ ನೀರು ತುಂಬಿ ಹರಿಯುತ್ತಿದ್ದ ಸೇತುವೆ ಮೂಲಕ ಬೈಕ್ ಚಲಾಯಿಸಿಕೊಂಡು ಹೋಗಲು ಮುಂದಾದ ವ್ಯಕ್ತಿಯೊಬ್ಬ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮಡ್ಚೆಲ್ಲಾದಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ವೇಣು ಎಂಬಾತ, ನದಿ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಬೈಕ್ ಚಲಾಯಿಸಿಕೊಂಡು ಸೇತುವೆ ದಾಟುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಸ್ವಲ್ಪ ದೂರ ಕ್ರಮಿಸಿದ ಬಳಿಕ ನೀರಿನ ಸೆಳವಿಗೆ ಸಿಲುಕಿ ಕೆಳಗೆ ಬಿದ್ದಿದ್ದು, ಕ್ಷಣ ಮಾತ್ರದಲ್ಲೇ ಆತನ ಬೈಕ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ನೀರಿನಿಂದ ಹೊರ ಬರಲಾಗದೆ ಪರದಾಡುತ್ತಿದ್ದ ವೇಣುವನ್ನು ಸೇತುವೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ರಕ್ಷಿಸಿದ್ದಾರೆ.