ಮಂಗಳೂರು: ಹನಿಟ್ರ್ಯಾಪ್ ಮೂಲಕ ಅಮಾಯಕರು, ಶ್ರೀಮಂತರನ್ನು ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸುಮಾರು 40 ವರ್ಷ ವಯಸ್ಸಿನ ಸುಂದರ ಮಹಿಳೆಯೊಬ್ಬಳು ಗ್ಯಾಂಗ್ ಲೀಡರ್ ಆಗಿದ್ದು, ಆಕೆಗೆ ಸಹಕಾರ ನೀಡಿದ್ದ 6 ಮಂದಿಯನ್ನು ಬಂಧಿಸಲಾಗಿದೆ. ಮಹಿಳೆ ಹನಿಟ್ರ್ಯಾಪ್ ಮೂಲಕ ಶ್ರೀಮಂತರನ್ನು ವಂಚಿಸುತ್ತಿದ್ದು, ಸದ್ಯ ಆಕೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಳೆ. ಡಿಸ್ಚಾರ್ಜ್ ಆದ ನಂತರ ಆಕೆಯನ್ನೂ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.
ಮಹಿಳೆ, ಬ್ಯಾಂಕ್ ಮ್ಯಾನೇಜರ್ ಒಬ್ಬರ ಸ್ನೇಹ ಸಂಪಾದಿಸಿ, ಸಲುಗೆ ಬೆಳೆಸಿಕೊಂಡಿದ್ದಾಳೆ. ಮ್ಯಾನೇಜರ್, ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ತೆರಳಿ ಆತನೊಂದಿಗೆ ಸರಸಕ್ಕೆ ಇಳಿದಿದ್ದಾಳೆ. ಇದೇ ವೇಳೆ ಮೊದಲೇ ರೂಪಿಸಿದ್ದ ಪ್ಲಾನ್ ನಂತೆ ಆಕೆಯ ಗ್ಯಾಂಗ್ ಎಂಟ್ರಿ ಕೊಟ್ಟು ದೃಶ್ಯಗಳನ್ನು ಸೆರೆ ಹಿಡಿದಿದೆ. ನಂತರ ಅವನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, 2 ಲಕ್ಷ ರೂ. ಹಣ, ಖಾಲಿ ಚೆಕ್ ಪಡೆದು ಅಲ್ಲಿಂದ ಪರಾರಿಯಾಗಿದ್ದಾರೆ.
ಬ್ಯಾಂಕ್ ಮ್ಯಾನೇಜರ್ ತಮ್ಮ ಆಪ್ತ ಅಧಿಕಾರಿ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಉರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದ ಸುಂದರಿ ಹೊರತುಪಡಿಸಿ 6 ಮಂದಿಯನ್ನು ಬಂಧಿಸಿದ್ದಾರೆ.