ಬೀದರ್: ಉತ್ತರ ಕರ್ನಾಟಕದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಜನ ಸಂಕಷ್ಟ ಅನುಭವಿಸುವಂತಾಗಿದೆ.
ಜಾನುವಾರುಗಳು, ಮಂಗಗಳಿಗೂ ತೊಂದರೆಯಾಗಿದೆ. ಕೆಲವೆಡೆ ಜಾನುವಾರು ಪ್ರವಾಹದಲ್ಲಿ ಕೊಚ್ಚಿ ಹೋದ ಬಗ್ಗೆ ವರದಿಯಾಗಿದೆ. ಬೀದರ್ ಜಿಲ್ಲೆಯ ಯರನಳ್ಳಿ ಗ್ರಾಮದ ಬಳಿ ನೆರೆ ಹಾವಳಿ ಉಂಟಾಗಿದೆ. ಮಾಂಜ್ರಾ ನದಿಯಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, 3-4 ದಿನಗಳಿಂದ ಪ್ರವಾಹ ಯಥಾಸ್ಥಿತಿಯಲ್ಲಿದೆ. ಈ ನಡುವೆ ಗ್ರಾಮದ ಹೊರ ವಲಯದಲ್ಲಿ ಮರವೊಂದರಲ್ಲಿ 20 ಕ್ಕೂ ಹೆಚ್ಚು ಮಂಗಗಳು ಬೀಡು ಬಿಟ್ಟಿವೆ.
ನೀರು ಸುತ್ತುವರೆದಿರುವುದರಿಂದ ಮರದಿಂದ ಕೆಳಗಿಳಿಯಲು ಮಂಗಗಳಿಗೆ ಸಾಧ್ಯವಾಗುತ್ತಿಲ್ಲ. 3 ದಿನಗಳಿಂದ ತಿನ್ನಲು ಆಹಾರ ಸಿಗದೇ ಮಂಗಗಳು ಕಿರುಚಾಡತೊಡಗಿವೆ. ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರೂ, ಸ್ಪಂದಿಸಿಲ್ಲ ಎಂದು ದೂರಲಾಗಿದೆ.
ಮಂಗಗಳ ರಕ್ಷಣೆಗೆ ಗ್ರಾಮಸ್ಥರು ವಿಫಲ ಯತ್ನ ನಡೆಸಿದ್ದಾರೆ. ನೀರು ನಿಂತಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಇದರೊಂದಿಗೆ ನಿಂತ ನೀರಿನಲ್ಲಿ ಹಾವುಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದೆ ಎಂದು ವರದಿಯಾಗಿದೆ.