ಮಧ್ಯಪ್ರದೇಶದ ಇಂದೋರ್ ನಲ್ಲಿ ಪತಿ ವಿರುದ್ಧ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪತಿ ಹಾಗೂ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾಳೆ. ಹನಿಮೂನ್ ಗೆ ಹೋದ ವೇಳೆ ಕೆಟ್ಟದಾಗಿ ನಡೆದುಕೊಂಡ ಪತಿ, ಹೋಂಡಾ ಸಿಟಿ ಕಾರ್ ನೀಡುವಂತೆ ಬೇಡಿಕೆ ಮುಂದಿಟ್ಟಿದ್ದ ಎಂದು ಪತ್ನಿ ದೂರಿನಲ್ಲಿ ಹೇಳಿದ್ದಾಳೆ.
ಎಂಬಿಎ ಪಾಸಾಗಿರುವ ಮೆಹ್ಸಾನ್ ನ ಮಹಿಳೆ, ಗಂಡ ವಿಕಾಸ್ ಸಕ್ಸೇನಾ, ಮಾವ, ಅತ್ತೆ ಹಾಗೂ ಗಂಡನ ಸೋದರಿ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ನೀಡಿದ್ದಾಳೆ. ಮ್ಯಾಟ್ರಿಮೋನಿಯಲ್ ಮೂಲಕ ಇಬ್ಬರ ಪರಿಚಯವಾಗಿತ್ತಂತೆ. ಡಿಸೆಂಬರ್ 24,2015 ರಲ್ಲಿ ಇಬ್ಬರ ಮದುವೆ ನಡೆದಿತ್ತಂತೆ.
ಯುವತಿಯ ತಂದೆ ಏಳುವರೆ ಲಕ್ಷ ನಗದು, ಚೈನ್, ಉಂಗುರ, ವಾಚ್ ಹಾಗೂ ಬಟ್ಟೆಯನ್ನು ನೀಡಿದ್ದರಂತೆ. ಆದ್ರೂ ತೃಪ್ತರಾಗದ ಗಂಡನ ಮನೆಯವರು ಲಕ್ಷಾಂತರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರಂತೆ. ಮದುವೆಯಾದ ನಾಲ್ಕು ದಿನದಲ್ಲಿ ಹನಿಮೂನ್ ಗೆ ಕೇರಳಕ್ಕೆ ಕರೆದುಕೊಂಡು ಹೋದ ಪತಿ ಕೆಟ್ಟದಾಗಿ ನಡೆದುಕೊಂಡಿದ್ದನಂತೆ. ಜೊತೆಗೆ ತವರು ಮನೆಯಿಂದ ಕಾರ್ ತರುವಂತೆ ಒತ್ತಾಯಿಸಿದ್ದನಂತೆ. ಇಷ್ಟೇ ಅಲ್ಲ ಮನೆಗೆ ಬಂದಾಗ ಮಾವ, ಅತ್ತೆ ಹಾಗೂ ನಾದಿನಿ ಕೂಡ ಚಿತ್ರ ಹಿಂಸೆ ನೀಡಿದ್ದಾರೆಂದು ಮಹಿಳೆ ದೂರಿದ್ದಾಳೆ. ಸದ್ಯ ಪತಿ ಆಸ್ಟ್ರೇಲಿಯಾದಲ್ಲಿದ್ದಾನೆ. ಆತ ಅಲ್ಲಿ ಕೆಲಸ ಮಾಡ್ತಾನೆಂದು ಮಹಿಳೆ ಹೇಳಿಕೆ ನೀಡಿದ್ದಾಳೆ.