ಜಗತ್ತಿನ ಅತಿ ದೊಡ್ಡ ಕಚ್ಚಾತೈಲದ ಮೂಲವಾಗಿದ್ದ ವೆನಿಜುವೆಲಾ, ಇಂದು ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆ ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ಕೆಳಮಟ್ಟದಲ್ಲಿದೆ ಎಂಬುದಕ್ಕೆ ಅಲ್ಲಿನ ಆಸ್ಪತ್ರೆಯಲ್ಲಿ ರಟ್ಟಿನ ಪೆಟ್ಟಿಗೆಯಲ್ಲಿ ಮಲಗಿರುವ ಶಿಶುಗಳೇ ಪ್ರತ್ಯಕ್ಷ ನಿದರ್ಶನ.
ಸಾಮಾಜಿಕ ಜಾಲತಾಣದಲ್ಲಿ ವೆನಿಜುವೆಲಾದ ಒಂದು ಆಸ್ಪತ್ರೆಯ ಫೋಟೋ ವೈರಲ್ ಆಗಿದೆ. ಈ ಫೋಟೋದಲ್ಲಿ ಹುಟ್ಟಿದ ಮಕ್ಕಳನ್ನು ರಟ್ಟಿನ ಪೆಟ್ಟಿಗೆಯಲ್ಲಿ ಮಲಗಿಸಿರುವುದು ಕಂಡುಬಂದಿದೆ. ಎಲ್ಲ ಪೆಟ್ಟಿಗೆಯ ಮೇಲೆ ಅವರವರ ಗುರುತನ್ನು ಚೀಟಿಯಲ್ಲಿ ಬರೆದು ಅಂಟಿಸಲಾಗಿದೆ. ಈ ಚೀಟಿಯ ಮೂಲಕವೇ ಮಕ್ಕಳನ್ನು ಗುರುತಿಸುವ ಪರಿಸ್ಥಿತಿ ಎದುರಾಗಿದೆ.
ಒಂದು ವರದಿಯ ಪ್ರಕಾರ, ವೆನಿಜುವೆಲಾದ ಬಹುತೇಕ ಆಸ್ಪತ್ರೆಗಳ ಪರಿಸ್ಥಿತಿಯೂ ಇದೇ ಆಗಿದೆ ಎನ್ನಲಾಗಿದೆ. ಹಣದುಬ್ಬರದ ಹಿನ್ನಲೆಯಲ್ಲಿ ಅಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಾಗಲಿ, ಔಷಧಗಳಾಗಲಿ ಅಥವಾ ಚಿಕಿತ್ಸೆಗೆ ಬೇಕಾಗುವ ಉಪಕರಣಗಳಾಗಲಿ ಇವ್ಯಾವುದೂ ಇಲ್ಲ. ಸಧ್ಯಕ್ಕೆ ಭಾರತ, ವೆನಿಜುವೆಲಾಕ್ಕೆ ಸಹಾಯ ಮಾಡಲು ಮುಂದಾಗಿದೆ. ಭಾರತ, ವೆನಿಜುವೆಲಾಕ್ಕೆ ಬೇಕಾಗುವ ಔಷಧಗಳನ್ನು ಪೂರೈಸುವ ಭರವಸೆ ನೀಡಿದೆ.