ಚೆನ್ನೈ: ಸ್ಯಾಮ್ ಸಂಗ್ ಕಂಪನಿಯ ಕೆಲವು ಮಾಡೆಲ್ ಸ್ಮಾರ್ಟ್ ಫೋನ್ ಗಳು, ಸ್ಪೋಟಗೊಂಡ ಕುರಿತಾಗಿ, ಇತ್ತೀಚೆಗೆ ಹೆಚ್ಚು ಸುದ್ದಿಯಾಗುತ್ತಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಇಲ್ಲಿದೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2 ಫೋನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ಫೋನ್ ಗಳಲ್ಲಿ ಬ್ಯಾಟರಿ ಸ್ಪೋಟಗೊಂಡ ಹಲವು ಘಟನೆ ನಡೆದ ನಂತರ, ನಾಗರೀಕ ವಾಯುಯಾನ ನಿರ್ದೇಶನಾಲಯ ವಿಮಾನಗಳಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 7 ನಿಷೇಧಿಸಿತ್ತು. ಇದೀಗ ಭಾರತದಲ್ಲಿನ ವಿಮಾನದಲ್ಲಿ ಸ್ಯಾಮ್ ಸಂಗ್ ಕಂಪನಿಯ ಸಾಧನಕ್ಕೆ ಬೆಂಕಿ ಹತ್ತಿದ ಮೊದಲ ಪ್ರಕರಣ ನಡೆದಿದೆ.
ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿಮಾನ ಇಳಿಯುವಾಗ, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 2 ಸ್ಮಾರ್ಟ್ ಫೋನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನದಲ್ಲಿ ಹೊಗೆ ಆವರಿಸಿದೆ. ತಕ್ಷಣ ಸಿಬ್ಬಂದಿ ಅದನ್ನು ನಂದಿಸಿದ್ದಾರೆ.
ಘಟನೆಯ ನಂತರ, ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ ಫೋನ್ ಗಳ ಸ್ವಿಚ್ ಆಫ್ ಮಾಡಲು ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ. ಅಲ್ಲದೇ, ಸೆಪ್ಟಂಬರ್ 26 ರಂದು ಹಾಜರಾಗುವಂತೆ ಸ್ಯಾಮ್ ಸಂಗ್ ಕಂಪನಿಯ ಅಧಿಕಾರಿಗಳಿಗೆ ವಾಯುಯಾನ ನಿರ್ದೇಶನಾಲಯ ಸೂಚನೆ ನೀಡಿದೆ.