ಗದಗ: ಅನೈತಿಕ ಸಂಬಂಧದಿಂದ ಏನೆಲ್ಲಾ ಅನಾಹುತವಾಗುತ್ತದೆ ಎಂಬುದನ್ನು ಹಲವಾರು ಪ್ರಕರಣಗಳಲ್ಲಿ ನೋಡಿರುತ್ತೀರಿ.
ಹೀಗೆ ಮಗನ ಅಕ್ರಮ ಸಂಬಂಧದ ಕಾರಣಕ್ಕೆ, ಮಹಿಳೆಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ಗದಗ ಜಿಲ್ಲೆ ಮುಳಗುಂದ ಗ್ರಾಮದಲ್ಲಿ ನಡೆದಿದೆ. 50 ವರ್ಷದ ಮಹಿಳೆ ಮೃತಪಟ್ಟವರು. ಈಕೆಯ ಕಿರಿಯ ಮಗ ಅದೇ ಗ್ರಾಮದ ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಯ ಮನೆಯವರು ಹಲವು ಬಾರಿ ಬುದ್ಧಿವಾದ ಹೇಳಿದ್ದರೂ, ಕೇಳದೇ ಸಂಬಂಧ ಮುಂದುವರೆಸಿದ್ದಾನೆ ಎನ್ನಲಾಗಿದೆ.
ವಿವಾಹಿತೆಯ ಮನೆಯವರು, ಯುವಕನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತಡೆಯಲು ಬಂದ ಆತನ ತಾಯಿ ಮೇಲೂ ಹಲ್ಲೆ ಮಾಡಿದ್ದು, ಅವರು ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಅಕ್ರಮ ಸಂಬಂಧದಿಂದ ಅಮ್ಮನ ಸಾವಿಗೆ ಕಾರಣನಾದ ಪುತ್ರ ಗಂಭೀರ ಸ್ಥಿತಿಯಲ್ಲಿದ್ದು, ಆಸ್ಪತ್ರೆ ಸೇರಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.