ಬಳ್ಳಾರಿ: ಮದುವೆ ಎಂದರೆ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ನವ ದಂಪತಿಗೆ ಮದುವೆ, ಮೊದಲ ರಾತ್ರಿಯ ಕುರಿತಂತೆ ಏನೇನೋ ಆಸೆ, ಕನಸುಗಳಿರುತ್ತವೆ.
ಆದರೆ, ಮೊದಲ ರಾತ್ರಿಯಲ್ಲೇ ನವವಧು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆ ಬೆಳಗಲ್ ಕ್ರಾಸ್ ನ ಯುವತಿಗೆ ಸೆಪ್ಟಂಬರ್ 14 ರಂದು ಮದುವೆಯಾಗಿದ್ದು, 16 ರಂದು ಆರತಕ್ಷತೆ ಹಾಗೂ ಮೊದಲ ರಾತ್ರಿ ನಿಗದಿಯಾಗಿತ್ತು. ವಧುವಿನ ಮನೆಯಲ್ಲಿ ಮೊದಲ ರಾತ್ರಿಗೆ ಸಿದ್ಧತೆ ನಡೆದಿದ್ದು, ಈ ಸಂದರ್ಭದಲ್ಲಿ ನವವಧು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಕೂಡಲೇ ಆಕೆಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ತೀವ್ರ ಸುಟ್ಟಗಾಯಗಳಾಗಿದ್ದ ಕಾರಣ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.