ಲಾರಿ ಚಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಲಾರಿಯಲ್ಲಿದ್ದ 2.5 ಕೋಟಿ ಮೌಲ್ಯದ 950 ಐಫೋನ್ ಗಳನ್ನು ಲೂಟಿ ಮಾಡಿರುವ ಘಟನೆ ರಾಜಧಾನಿ ದೆಹಲಿಯ ವಸಂತ್ ಕುಂಜ್ ನಲ್ಲಿ ನಡೆದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಲಕ ಕಲಮ್ ಸಿಂಗ್ ಮಂಗಳವಾರ ಐಫೋನ್ ತುಂಬಿದ ಲಾರಿಯೊಂದಿಗೆ ಓಖಲಾದಿಂದ ದ್ವಾರಕಾಗೆ ಹೊರಟಿದ್ದರು. ದಾರಿ ಮಧ್ಯೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಖಾರದ ಪುಡಿಯನ್ನು ಕಲಮ್ ಅವರ ಮೈ ಹಾಗೂ ಕಣ್ಣಿಗೆ ಎರಚಿದ್ದಾರೆ. ಮೊದಲು ಇದು ಯಾವುದೋ ಮಕ್ಕಳ ಚೇಷ್ಟೆಯಾಗಿರಬಹುದೆಂದುಕೊಂಡ ಕಲಮ್ ಅವರಿಗೆ ಸ್ವಲ್ಪಸಮಯದ ನಂತರ ಕಣ್ಣು, ಮೈಕೈ ಉರಿಯಲಾರಂಭಿಸಿದೆ.
ಉರಿ ಸಹಿಸಿಕೊಳ್ಳಲಾಗದೇ ಚಾಲಕ ಲಾರಿಯಿಂದ ಕೆಳಗಿಳಿದಾಗ ಇಬ್ಬರು ದರೋಡೆಕೋರರು ಚಾಕು ತೋರಿಸಿ ಕಲಮ್ ಅವರನ್ನು ಮತ್ತೆ ಲಾರಿ ಹತ್ತಿಸಿದ್ದಾರೆ. ಚಾಕು ತೋರಿಸಿ ಬೆದರಿಸಿದ ದರೋಡೆಕೋರರು ಲಾರಿಯನ್ನು ರಂಗಾಫುರ ಕಾಡಿನೆಡೆಗೆ ಓಡಿಸಲು ಹೇಳಿದ್ದಾರೆ. ಮೊದಲೇ ನಿರ್ಧಾರವಾಗಿದ್ದ ಸ್ಥಳಕ್ಕೆ ತಲುಪಿದ ನಂತರ ಅಲ್ಲಿ ಆಗಲೇ ಒಂದು ಪಿಕ್ ಅಪ್ ವ್ಯಾನ್ ನಿಂತಿದ್ದು, ಎಲ್ಲ ಐಫೋನ್ ಗಳನ್ನು ಆ ವ್ಯಾನ್ ಗೆ ತುಂಬಿಕೊಂಡ ಕಳ್ಳರು ಪರಾರಿಯಾಗಿದ್ದಾರೆ.
ಚಾಲಕನ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು, ಸಿಸಿ ಟಿವಿ ದೃಶ್ಯಾವಳಿಯ ಸಹಾಯದಿಂದ ಆರೋಪಿಗಳನ್ನು ಗುರುತಿಸಿದ್ದಲ್ಲದೇ ಮೆಹತಾಬ್ ಆಲಮ್, ಅರಮಾನ್, ಪ್ರದೀಪ್ ಜಿತೇಂದ್ರ ಎಂಬವರನ್ನು ಬಂಧಿಸಿ ಅವರಿಂದ 2.5 ಕೋಟಿ ಮೌಲ್ಯದ ಐಫೋನ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.