ಭಾರತ ಕ್ರಿಕೆಟ್ ತಂಡಕ್ಕೆ ಸೆಪ್ಟಂಬರ್ 22 ಮಹತ್ವದ ದಿನ. ಅಂದು ಕಾನ್ಪುರದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಭಾರತದ 500 ನೇ ಟೆಸ್ಟ್ ಪಂದ್ಯವಾಗಿದೆ.
500 ಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ದೇಶಗಳಲ್ಲಿ 976 ಪಂದ್ಯಗಳನ್ನಾಡಿರುವ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 791 ಹಾಗೂ ವೆಸ್ಟ್ ಇಂಡೀಸ್ 517 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಕ್ರಮವಾಗಿ 2 ಹಾಗೂ 3 ನೇ ಸ್ಥಾನದಲ್ಲಿವೆ. ಭಾರತ 500 ನೇ ಟೆಸ್ಟ್ ಪಂದ್ಯವನ್ನು ಎದುರು ನೋಡುತ್ತಿದೆ. ಐತಿಹಾಸಿಕ 500 ನೇ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಟೀಂ ಇಂಡಿಯಾದ ಎಲ್ಲಾ ಮಾಜಿ ನಾಯಕರನ್ನು ಸನ್ಮಾನಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತೀರ್ಮಾನಿಸಿದೆ.
1952 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಹಾಗೂ 8 ರನ್ ಅಂತರದಿಂದ ಭಾರತ ತಂಡ ಗೆಲುವು ಕಂಡಿತ್ತು. ವಿದೇಶಿ ನೆಲದಲ್ಲಿ 1968 ರಲ್ಲಿ ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಜಯ ಗಳಿಸಿತ್ತು. ಲಾಲಾ ಅಮರ್ ನಾಥ್ 1933 ರಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ್ದು, ಭಾರತದ ಪರ ಮೊದಲ ಶತಕವಾಗಿದೆ.
ಪಾಲಿ ಉಮ್ರಿಗರ್ 1956 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ದ್ವಿಶತಕ ಗಳಿಸಿದರೆ, 2004 ರಲ್ಲಿ ವೀರೇಂದ್ರ ಸೆಹ್ವಾಗ್ ಪಾಕ್ ವಿರುದ್ಧ ಭಾರತದ ಮೊದಲ ತ್ರಿ ಶತಕ ಗಳಿಸಿದ್ದಾರೆ. 1999 ರಲ್ಲಿ ಪಾಕ್ ವಿರುದ್ಧ ಅನಿಲ್ ಕುಂಬ್ಳೆ ಒಂದೇ ಇನ್ನಿಂಗ್ಸ್ ನಲ್ಲಿ ಎಲ್ಲಾ 10 ವಿಕೆಟ್ ಗಳಿಸಿ ದಾಖಲೆ ಬರೆದಿದ್ದಾರೆ.
ಟೆಸ್ಟ್ ನಲ್ಲಿ 499 ಪಂದ್ಯಗಳನ್ನು ಆಡಿರುವ ಭಾರತ ತಂಡ 129 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 157 ಪಂದ್ಯಗಳನ್ನು ಸೋತಿದೆ. 212 ಪಂದ್ಯಗಳು ಡ್ರಾ ಆಗಿದ್ದರೆ, 1 ಪಂದ್ಯ ಟೈ ಆಗಿದೆ.