ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕನ್ನಡಪರ ಸಂಘಟನೆಗಳು, ರಾಜ್ಯದಲ್ಲಿ ಇಂದು ರೈಲು ಸಂಚಾರ ಬಂದ್ ಮಾಡುವುದಾಗಿ ಕರೆ ನೀಡಿದ ಹಿನ್ನಲೆಯಲ್ಲಿ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ರಾಜ್ಯದ ರೈಲು ನಿಲ್ದಾಣಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಬೆಂಗಳೂರಿನಲ್ಲಿ ಪ್ರಕ್ಷುಬ್ಧ ಸ್ಥಿತಿ ನಂತರ ಪರಿಸ್ಥಿತಿ ತಿಳಿಯಾಗಿದ್ದು, ರೈಲು ಸಂಚಾರ ತಡೆಗೆ ಕರೆ ನೀಡಿದ್ದರಿಂದ ನಗರದ ಎಲ್ಲಾ ನಿಲ್ದಾಣಗಳಲ್ಲಿ ಪ್ಯಾರಾ ಮಿಲಿಟರಿ ಪಡೆ, ಕೆ.ಎಸ್.ಆರ್.ಪಿ. ಸೇರಿದಂತೆ ಹಲವು ತುಕಡಿಗಳಿಂದ ಭದ್ರತೆ ಕೈಗೊಳ್ಳಲಾಗಿದೆ. ಪ್ರಯಾಣಿಕರನ್ನು ಪರಿಶೀಲಿಸಿ ನಿಲ್ದಾಣದ ಒಳಗೆ ಬಿಡಲಾಗುತ್ತಿದೆ.
ಬೆಂಗಳೂರಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಪ್ಟಂಬರ್ 25 ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಿಲ್ದಾಣದೊಳಕ್ಕೆ ಪ್ರವೇಶಿಸಿ, ರೈಲು ತಡೆಯುವ ಸಾಧ್ಯತೆ ಇದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ. ಸದ್ಯ ಎಲ್ಲಾ ರೈಲು ಸಂಚಾರ ಎಂದಿನಂತೆ ಇದೆ.