ಬೆಂಗಳೂರು: ಬೆಂಗಳೂರಿನಲ್ಲಿ ಕಾವೇರಿ ಹೋರಾಟ ಹಿಂಸೆಗೆ ತಿರುಗಿ, ಅನೇಕ ಅನಾಹುತ ನಡೆದಿರುವ ಬೆನ್ನಲ್ಲೇ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಬೆಂಗಳೂರು ಲಗ್ಗೆರೆ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ದರ್ಶನ್, ಶ್ರೀಕಾಂತ್ ಎಂಬ ವಿದ್ಯಾರ್ಥಿಗಳು ನಾಪತ್ತೆಯಾದವರು. ನಿನ್ನೆ ಮಧ್ಯಾಹ್ನದಿಂದ ಈ ಇಬ್ಬರು ನಾಪತ್ತೆಯಾಗಿದ್ದು, ರಾಜಗೋಪಾಲನಗರ ಠಾಣೆ ಪೊಲೀಸರಿಗೆ ದೂರು ನೀಡಲು ಹೋಗಿದ್ದರೂ, ಪೊಲೀಸರು ಸ್ಪಂದಿಸಿಲ್ಲ ಎಂದು ಶ್ರೀಕಾಂತ್ ಪೋಷಕರು ದೂರಿದ್ದಾರೆ ಎನ್ನಲಾಗಿದೆ.
ಲಗ್ಗೆರೆ ಪ್ರೀತಿನಗರ ನಿವಾಸಿಗಳ ಮಕ್ಕಳಾದ ಇಬ್ಬರೂ ನಿನ್ನೆ ಸಂಜೆಯಿಂದಲೂ ನಾಪತ್ತೆಯಾಗಿದ್ದು, ಪೋಷಕರು ಹುಡುಕಾಟ ನಡೆಸಿದ್ದಾರೆ. ಕಾವೇರಿ ಹೋರಾಟ ತೀವ್ರವಾಗಿರುವ ಸಂದರ್ಭದಲ್ಲೇ ಮಕ್ಕಳು ನಾಪತ್ತೆಯಾಗಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.