ನವದೆಹಲಿ: ಈಗಾಗಲೇ ಹಲವಾರು ವಿಮಾನಯಾನ ಸಂಸ್ಥೆಗಳು ಸುಲಭ ದರದಲ್ಲಿ ವಿಮಾನ ಪ್ರಯಾಣಕ್ಕೆ ಅವಕಾಶ ಕಲ್ಪಿಸಿವೆ. ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಕೂಡ, ಹೊರೆಯಾಗದಂತೆ ವಿಮಾನ ಯಾನಕ್ಕೆ ಅವಕಾಶ ಕಲ್ಪಿಸಿದೆ.
ಏರ್ ಇಂಡಿಯಾ ಆಯ್ದ ದೇಶೀಯ ಮಾರ್ಗಗಳಲ್ಲಿ ಸೀಮಿತ ಅವಧಿಯವರೆಗೆ 1499 ರೂಪಾಯಿ ಆರಂಭಿಕ ದರದಲ್ಲಿ ರಿಯಾಯಿತಿ ಟಿಕೆಟ್ ಘೋಷಿಸಿದೆ. ಮೇ 25ರೊಳಗೆ ಟಿಕೆಟ್ ಬುಕ್ ಮಾಡಿದಲ್ಲಿ ಜುಲೈ- ಸೆಪ್ಟಂಬರ್ 30ರ ಅವಧಿಯಲ್ಲಿ ಪ್ರಯಾಣ ಮಾಡಬಹುದಾಗಿದೆ. ಏರ್ ಏಷಿಯಾ, ಸ್ಪೈಸ್ ಜೆಟ್ ಹಾಗೂ ಇಂಡಿಗೋ ವಿಮಾನಯಾನ ಸಂಸ್ಥೆಗಳು ವಿವಿಧ ಮಾರ್ಗಗಳಲ್ಲಿ ರಿಯಾಯಿತಿ ಪ್ರಯಾಣದ ಟಿಕೆಟ್ ನೀಡಿದ್ದು, ಇದೀಗ ಏರ್ ಇಂಡಿಯಾ ರಿಯಾಯಿತಿ ಘೋಷಿಸಿದೆ.
ಜನವರಿಯಿಂದ ಮಾರ್ಚ್ ಮತ್ತು ಜುಲೈ- ಸೆಪ್ಟಂಬರ್ ಅವಧಿಯಲ್ಲಿ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ಹೆಚ್ಚಿನ ವಿಮಾನಗಳಲ್ಲಿ ಶೇ.50 ರಷ್ಟು ಕೂಡ ಭರ್ತಿಯಾಗುವುದಿಲ್ಲ. ಹಾಗಾಗಿ ರಿಯಾಯಿತಿ ಟಿಕೆಟ್ ಘೋಷಿಸಲಾಗುತ್ತದೆ ಎಂದು ಹೇಳಲಾಗಿದೆ.