ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ಧರಾಮಯ್ಯ ಈ ವಿಷಯ ತಿಳಿಸಿದ್ದಾರೆ.
ಎಲ್ಲ ಬೆಳವಣಿಗೆ ನೋಡಿ ಈ ನಿರ್ಧಾರ ಕೈಗೊಂಡಿರುವುದಾಗಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಸೆಪ್ಟೆಂಬರ್ 18ರಂದು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪಿ ಎಲ್ ಸಿ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕ ಪರ ವಕೀಲರು ಹೋರಾಟ ನಡೆಸಲಿದ್ದಾರೆಂದು ಸಿಎಂ ಭರವಸೆ ನೀಡಿದ್ದಾರೆ.
ನಿನ್ನೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಪಾಡು ಆದೇಶ ಪಾಲನೆ ಸ್ವಲ್ಪ ಕಷ್ಟವಾಗಲಿದೆ. 18 ಸಾವಿರ ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ನಾವು ಬಿಡಬೇಕಿದೆ. ಸುಪ್ರೀಂ ಕೋರ್ಟ್ ಮಾರ್ಪಾಡು ಆದೇಶ ರಾಜ್ಯಕ್ಕೆ ದೊಡ್ಡ ಹೊಡೆತ ನೀಡಿದೆ ಎಂದು ಸಿಎಂ ಹೇಳಿದ್ದಾರೆ. ಸೆಪ್ಟೆಂಬರ್ 20ರಂದು ಮತ್ತೆ ಸುಪ್ರೀಂ ಕೋರ್ಟ್ ಗೆ ಸ್ಪಷ್ಟನೆ ನೀಡುವುದಾಗಿ ಸಿಎಂ ಹೇಳಿದ್ದಾರೆ.
ಇಂದು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆ ಆಸ್ತಿಪಾಸ್ತಿ ರಕ್ಷಣೆ ನಮ್ಮ ಹೊಣೆ ಎಂದು ಸಿಎಂ ಭರವಸೆ ನೀಡಿದ್ದಾರೆ. ತಮಿಳರು ಸೇರಿ ಎಲ್ಲರ ರಕ್ಷಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಒದಗಿಸಲಾಗಿದೆ. ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಬೇಡ. ಆಸ್ತಿಪಾಸ್ತಿಗೆ ಹಾನಿ ಮಾಡಬೇಡಿ ಎಂದು ಸಿಎಂ ಮನವಿ ಮಾಡಿದ್ದಾರೆ.
ಬೆಂಗಳೂರು,ಮೈಸೂರು ಮಂಡ್ಯಕ್ಕೆ ಕುಡಿಯುವ ನೀರು ಪೂರೈಕೆಯಾಗಲಿದೆ. ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಿಲ್ಲ. ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಜೂನ್ 2017 ರವರೆಗೂ ಯಾವುದೇ ತೊಂದರೆ ಇಲ್ಲ ಎಂದು ಸಿಎಂ ತಿಳಿಸಿದ್ದಾರೆ.