ಸರ್ಕಾರಿ ಯೋಜನೆಗಳು ಹೇಗೆ ಹಳ್ಳ ಹಿಡಿಯುತ್ತವೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೃದ್ದ ಜೀವಿಗಳಿಗೆ ಸಂಧ್ಯಾ ಕಾಲದಲ್ಲಿ ನೆರವಾಗಲೆಂಬ ಕಾರಣಕ್ಕೆ ವೃದ್ದಾಪ್ಯ ವೇತನ ಜಾರಿಗೆ ತಂದಿದ್ದು, ಆದರೆ ಭ್ರಷ್ಟ ಅಧಿಕಾರಿಗಳು ಹಾಗೂ ಕೆಲ ರಾಜಕಾರಣಿಗಳ ಶಾಮೀಲಿನಿಂದಾಗಿ ಈ ಹಣ ಅನರ್ಹರ ಪಾಲಾಗುತ್ತಿರುವ ಸಂಗತಿ ಮಧ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮಧ್ಯ ಪ್ರದೇಶದ ಶೆಪೂರ್ ಜಿಲ್ಲೆಯಲ್ಲಿ ಪಂಚಾಯತ್ ಅಧಿಕಾರಿಗಳು, ಫಲಾನುಭವಿಗಳ ಪಟ್ಟಿ ಪರಿಶೀಲಿಸಿದ ವೇಳೆ ಈ ಕರ್ಮಕಾಂಡ ಬಯಲಾಗಿದೆ. 10 ರಿಂದ 20 ವರ್ಷದೊಳಗಿನ ಸುಮಾರು 200 ಮಂದಿ ವಯಸ್ಸಿನ ಕುರಿತು ಸುಳ್ಳು ದಾಖಲೆ ನೀಡಿ ವೃದ್ದಾಪ್ಯ ವೇತನ ಪಡೆಯುತ್ತಿರುವುದು ಕಂಡು ಬಂದಿದ್ದು, ಅವರುಗಳ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಅಚ್ಚರಿಯ ಸಂಗತಿಯೆಂದರೆ ಎರಡು ಬಾರಿ ಕಾರ್ಪೋರೇಟರ್ ಆಗಿದ್ದ ರಮೇಶ್ ಚಕ್ರವತಿ ಎಂಬಾತನ ಪುತ್ರಿ ಪೂಜಾ ಚಕ್ರವರ್ತಿ ಕಳೆದ 10 ವರ್ಷಗಳಿಂದ ವೃದ್ದಾಪ್ಯ ವೇತನ ಪಡೆಯುತ್ತಿದ್ದು, ಆಕೆಯ ವಯಸ್ಸು ಈಗ ಕೇವಲ 20. ಅಂದರೆ 10 ವರ್ಷದವಳಾಗಿದ್ದಾಗಲೇ ಆಕೆಗೆ ವೃದ್ದಾಪ್ಯ ವೇತನ ಬರುತ್ತಿರುವುದು ಖಾತ್ರಿಯಾಗಿದೆ. ಇದೇ ರೀತಿ 35 ವರ್ಷದ ಸಂಪತಿ ಬಾಯಿ, 30 ವರ್ಷದ ಸಂತೋಷ್ ಗುಪ್ತಾ, 28 ವರ್ಷದ ಮೆಹಮ್ಮೂದ್ ಖಾನ್ ಹಲವು ವರ್ಷಗಳಿಂದಲೂ ಈ ಸೌಲಭ್ಯ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.