ನವದೆಹಲಿ: ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುವುದು ಹೊಸದೇನಲ್ಲ. ಅಂತಹ ಹಲವು ಘಟನೆ ನಡೆದಿವೆ. ಹೀಗೆ ವ್ಯಾಪಾರಿಯೊಬ್ಬರನ್ನು ವಂಚಿಸಿದ ಪ್ರಕರಣದ ವರದಿ ಇಲ್ಲಿದೆ ನೋಡಿ.
ನವದೆಹಲಿಯ ತುಘಲಕ್ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್ ಒಂದರಲ್ಲಿ ದುಬೈ ವ್ಯಾಪಾರಿಯೊಬ್ಬರನ್ನು ವಂಚಿಸಿದ ಯುವತಿಯೊಬ್ಬಳು, 46 ಲಕ್ಷ ರೂ. ಮೌಲ್ಯದ ವಾಚ್ ಹಾಗೂ 1 ಲಕ್ಷ ರೂ ಇದ್ದ ಬ್ಯಾಗ್ ಅಪಹರಿಸಿದ್ದಾಳೆ. ಯುವತಿ ಬಾಲಿವುಡ್ ನಟಿಯಾಗಬೇಕೆಂದುಕೊಂಡಿದ್ದು, ಆಕೆಯ ಹೆಸರು ಮತ್ತು ಫೋನ್ ನಂಬರ್ ಹೊರತಾಗಿ ವ್ಯಾಪಾರಿಯ ಬಳಿ ಹೆಚ್ಚಿನ ಮಾಹಿತಿ ಇಲ್ಲವಾಗಿದೆ. ಪಶ್ಚಿಮ ದೆಹಲಿ ನಿವಾಸಿಯಾಗಿರುವ ವ್ಯಾಪಾರಿ ದುಬೈನಲ್ಲಿ ಬ್ಯುಸಿನೆಸ್ ಮಾಡುತ್ತಾರೆ.
ದೆಹಲಿಯಲ್ಲಿ ತಮ್ಮ ಬ್ಯುಸಿನೆಸ್ ಪಾಲುದಾರರನ್ನು ಭೇಟಿ ಮಾಡಲು ಬಂದಿದ್ದ ಸಂದರ್ಭದಲ್ಲಿ ಪರಿಚಯವಾದ ಯುವತಿ ಫ್ರೆಂಡ್ ಆಗಿದ್ದಾಳೆ. ಸ್ಟಾರ್ ಹೋಟೆಲ್ ನಲ್ಲಿ ತಡರಾತ್ರಿವರೆಗೂ ಕಾಲ ಕಳೆದು ಹಣ, ವಾಚ್ ಇದ್ದ ಬ್ಯಾಗ್ ಅಪಹರಿಸಿದ್ದಾಳೆ. ವ್ಯಾಪಾರಿ ನೀಡಿದ ದೂರಿನ ಅನ್ವಯ ಮಾಹಿತಿ ಪಡೆದ ಪೊಲೀಸರು, ಹೋಟೆಲ್ ಸಿ.ಸಿ. ಟಿ.ವಿ. ಪೂಟೇಜ್ ಆಧರಿಸಿ ಯುವತಿ ಪತ್ತೆಗೆ ಬಲೆ ಬೀಸಿದ್ದಾರೆ.