ನಶೆಯ ಅಮಲಲ್ಲಿ ಕಂದನನ್ನೇ ಮರೆತ ದಂಪತಿಯ ಸ್ಟೋರಿ ಇದು. ಓಹಿಯೋ ನಗರದ ಜೇಮ್ಸ್ ಅಕಾರ್ಡ್ ಹಾಗೂ ರೋಂಡಾ ಪಸೆಕ್ ತಮ್ಮ ಫೋರ್ಡ್ ಎಕ್ಸ್ ಪ್ಲೋರರ್ ಕಾರಿನಲ್ಲಿ ಹೊರಟಿದ್ರು. ಅಕಾರ್ಡ್ ಹಾಗೂ ಪಸೆಕ್ ಮುಂದಿನ ಸೀಟಿನಲ್ಲಿದ್ರೆ, 4 ವರ್ಷದ ಮಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ.
ದಂಪತಿಗೆ ಅದೆಂಥಾ ಡ್ರಗ್ಸ್ ಹುಚ್ಚಿತ್ತೋ ಗೊತ್ತಿಲ್ಲ, ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿ ಇಬ್ರೂ ಹೆರಾಯಿನ್ ಸೇವಿಸಿದ್ದಾರೆ. ಡ್ರಗ್ಸ್ ಓವರ್ ಡೋಸ್ ನಿಂದ ತಕ್ಷಣ ಇಬ್ಬರಿಗೂ ಅಮಲೇರಿ, ನಿದ್ದೆ ಬಂದುಬಿಟ್ಟಿದೆ. ತಂದೆ- ತಾಯಿ ಇಬ್ರೂ ಡ್ರಗ್ಸ್ ನಶೆಯಲ್ಲಿ ಬಾಯಿ ತೆರೆದುಕೊಂಡು ಕಾರಲ್ಲೇ ಗಾಢ ನಿದ್ದೆ ಮಾಡ್ತಾ ಇದ್ರೆ, ಇದ್ಯಾವುದನ್ನೂ ಅರಿಯದ ಮುಗ್ಧ ಮಗು ಹಿಂದಿನ ಸೀಟಿನಲ್ಲಿ ಕುಳಿತು ಭಯದಿಂದ ನೋಡುತ್ತಿತ್ತು. ಇದನ್ನು ಗಮನಿಸಿದ ಓಹಿಯೋ ಪೊಲೀಸರು ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಷ್ಟೇ ಅಲ್ಲ ಮಗುವನ್ನು ಆಪತ್ತಿಗೆ ಸಿಲುಕಿಸಿದ ಆರೋಪದ ಮೇಲೆ ಅಕಾರ್ಡ್ ಹಾಗೂ ಪೆಸೆಕ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಡ್ರಗ್ಸ್ ಸೇವನೆ ನಿಷೇಧ ಅಂಥದ್ರಲ್ಲಿ ಮನಸೋ ಇಚ್ಛೆ ಹೆರಾಯಿನ್ ಸೇವಿಸಿ ಮಗುವನ್ನು ಆತಂಕಕ್ಕೆ ತಳ್ಳಿದ್ದು ಅಕ್ಷಮ್ಯ ಅಪರಾಧ ಎನ್ನುತ್ತಾರೆ ಪೊಲೀಸರು. ಈ ಕೃತ್ಯದ ಫೋಟೋ ತೆಗೆದು ಓಹಿಯೋ ಪೊಲೀಸರು ಫೇಸ್ ಬುಕ್ ಗೂ ಹಾಕಿದ್ದರು. ಈ ಪೋಸ್ಟ್ ಅನ್ನು 20,000ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದು, 3000ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ.