ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿದ್ದ ಕಾರು ಪಂಜಾಬ್ ನಲ್ಲಿ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಕೇಜ್ರಿವಾಲ್ ಸೇರಿದಂತೆ ಯಾರಿಗೂ ಘಟನೆಯಲ್ಲಿ ಗಾಯಗಳಾಗಿಲ್ಲ.
4 ದಿನಗಳ ಪಂಜಾಬ್ ಪ್ರವಾಸದಲ್ಲಿರುವ ಕೇಜ್ರಿವಾಲ್, ಟೊಯೋಟಾ ಇನ್ನೋವಾ ಕಾರಿನಲ್ಲಿ ಲುಧಿಯಾನಾದಿಂದ ಅಮೃತಸರಕ್ಕೆ ಹೊರಟಿದ್ದರು. ಜಲಂಧರ್ ಹೊರವಲಯದ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ತ್ರಿಚಕ್ರವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಮುಂದಾಗಿದ್ದಾನೆ.
ಈ ವೇಳೆ ಕೇಜ್ರಿವಾಲ್ ಅವರ ಕಾರು ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಇದೊಂದು ಸಣ್ಣ ಪ್ರಮಾಣದ ಅಪಘಾತವಾಗಿತ್ತು, ಪಾದಚಾರಿ ಪಾರಾಗಿದ್ದಾನೆ. ಅಪಘಾತದಲ್ಲಿ ಕೇಜ್ರಿವಾಲ್ ಅವರ ಕಾರು ಜಖಂಗೊಂಡಿದೆ.
ಹಾಗಾಗಿ ಕೇಜ್ರಿವಾಲ್ ಅವರನ್ನು ಬೇರೆ ಕಾರಿನಲ್ಲಿ ಅಮೃತಸರಕ್ಕೆ ಕಳುಹಿಸಿಕೊಡಲಾಯ್ತು. ಒಂದೆಡೆ ಎಎಪಿಯಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದ್ದು, ಅದರ ಮಧ್ಯೆಯೇ ಕೇಜ್ರಿವಾಲ್ ಪಂಜಾಬ್ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪಂಜಾಬ್ ಪ್ರವಾಸ ಕೈಗೊಂಡಿದ್ದಾರೆ.