ಬೆಂಗಳೂರು: ಕಾವೇರಿ ನದಿ ನೀರಿಗಾಗಿ ಶುಕ್ರವಾರ ಕರ್ನಾಟಕ ಬಂದ್ ನಡೆಸಲಾಗಿದ್ದು, ಯಶಸ್ವಿಯಾಗಿದೆ. ಇದೇ ಸಂದರ್ಭದಲ್ಲಿ ಕೆಲವು ಅಹಿತಕರ ಘಟನೆಗಳು ನಡೆದ ವರದಿಯಾಗಿದೆ.
ಪ್ರತಿಭಟನೆ ಸಂದರ್ಭದಲ್ಲಿ ಮಂಡ್ಯದಲ್ಲಿ ಕೆ.ಆರ್.ಎಸ್. ಡ್ಯಾಂ ಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯುವಾಗ, ಚೋಳರ ಪಾಳ್ಯ ನಿವಾಸಿ 30 ವರ್ಷದ ಪ್ರಭು ಎಂಬಾತ ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಬೆಂಗಳೂರು ಶಿವಾಜಿನಗರದ ಕಾಮರಾಜ್ ರಸ್ತೆಯಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಅಳವಡಿಸಿದ್ದ ತಮಿಳು ಬರಹವಿದ್ದ ಫ್ಲೆಕ್ಸ್ ಹರಿದು ಹಾಕಿದ ಸಂದರ್ಭದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.
ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಟ್ಯಾಕ್ಸಿ ಇಲ್ಲದ ಕಾರಣ, ಸಂಜೆಯವರೆಗೆ ಕಾಯುವಂತಾಗಿತ್ತು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿಜಯಪುರದ ವ್ಯಕ್ತಿಯೊಬ್ಬರನ್ನು ಮೆಜೆಸ್ಟಿಕ್ ನಲ್ಲಿ ಸಾರ್ಜನಿಕರು ಅಂಬುಲೆನ್ಸ್ ನಲ್ಲಿ ಜಯದೇವ ಆಸ್ಪತ್ರೆಗೆ ಕಳಿಸಿದ್ದಾರೆ ಎನ್ನಲಾಗಿದೆ. ಬಂದ್ ನಿಂದ ಬಸ್ ಸಂಚಾರ ಇಲ್ಲದ ಕಾರಣ, ವಿವಿಧ ಕಡೆಗಳಲ್ಲಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ.