ಸ್ಮಾರ್ಟ್ ಫೋನ್ ನಮ್ಮ ಜೀವನದ ಒಂದು ಅಂಗವಾಗ್ಬಿಟ್ಟಿದೆ. ಎಲ್ಲರ ಕೈನಲ್ಲೂ ಸ್ಮಾರ್ಟ್ ಫೋನ್ ಇದ್ದೇ ಇರುತ್ತೆ. ಎಲ್ಲ ವಯಸ್ಸಿನವರೂ ಸ್ಮಾರ್ಟ್ ಫೋನ್ ಇಷ್ಟಪಡ್ತಾರೆ. ನಾವು ಬಳಸುವುದನ್ನು ನೋಡಿ ಮಕ್ಕಳೂ ಸ್ಮಾರ್ಟ್ ಫೋನ್ ಕೈನಲ್ಲಿ ಹಿಡಿಯುತ್ತಿದ್ದಾರೆ.
ಎರಡು ವರ್ಷದಲ್ಲಿಯೇ ನನ್ನ ಮಗು ಸ್ಮಾರ್ಟ್ ಫೋನ್ ಬಳಸೋದನ್ನು ಕಲಿತಿದೆ. ಟಿವಿ ರಿಮೋಟ್ ಹಿಡಿದು ಚಾನೆಲ್ ಹೇಗೆ ಬದಲಾಯಿಸುತ್ತೆ ಗೊತ್ತಾ ಅಂತಾ ಹೆಮ್ಮೆಯಿಂದ ಹೇಳ್ತಾರೆ ಪಾಲಕರು. ಆದ್ರೆ ಇನ್ಮುಂದೆಯಾದ್ರೂ 14 ವರ್ಷದೊಳಗಿನ ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ನೀಡುವಾಗ ಎಚ್ಚರವಿರಲಿ.
ಸ್ಮಾರ್ಟ್ ಫೋನ್ ಆಪರೇಟ್ ಮಾಡುವ ನಿಮ್ಮ ಮಗು ವೇಗವಾಗಿ ಬೆಳೆಯುತ್ತಿದೆ ಎಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ. ಮಗುವಿನ ಆರೋಗ್ಯದ ಮೇಲೆ ಸ್ಮಾರ್ಟ್ ಫೋನ್ ಪ್ರತಿಕೂಲ ಪರಿಣಾಮ ಬೀರುತ್ತದೆ. ಅತಿ ಹೆಚ್ಚು ಟಿವಿ ನೋಡುವ ಮಕ್ಕಳು ಬೊಜ್ಜಿನಿಂದ ಬಳಲ್ತಾರೆ. ಹಾಗೆ ಸ್ಮಾರ್ಟ್ ಫೋನ್ ಬಳಸುವ ಮಕ್ಕಳಿಗೂ ಈ ಸಮಸ್ಯೆ ಎದುರಾಗಲಿದೆ. ಹೊರಾಂಗಣ ಆಟ ಬಿಟ್ಟು ಮಕ್ಕಳು ಕುಳಿತಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ಬಳಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಲಿವೆ.
ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ನೀಡಲು 14 ವರ್ಷ ಸೂಕ್ತ ವಯಸ್ಸು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ವಯಸ್ಸಿನಲ್ಲಿ ಮಕ್ಕಳಿಗೆ ಸರಿ- ತಪ್ಪಿನ ಅರಿವಿರುತ್ತದೆ. ಹಾಗಾಗಿ 14 ವರ್ಷ ಕೆಳಗಿರುವ ಮಕ್ಕಳಿಂದ ಸ್ಮಾರ್ಟ್ ಫೋನ್ ದೂರವಿಡಿ ಎನ್ನುತ್ತಾರೆ ತಜ್ಞರು.